ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.27: ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರು ಹಾಗೂ ಮತಗಟ್ಟೆ ಮಟ್ಟದ ಪಕ್ಷದ ಏಜೆಂಟರುಗಳ ಮುಖಾಂತರ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು.
ಇಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಡೆದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಪ್ರತಿನಿದಿಗಳ ಸಭೆಯಲ್ಲಿ ಮಾತನಾಡಿದ ಅವರು ರಾಜಕೀಯ ಪಕ್ಷಗಳು ಹೆಚ್ಚಿನ ಕಾರ್ಯಕರ್ತರನ್ನು ಹೊಂದಿರುತ್ತಾರೆ, ನಿಮ್ಮ ಸಹಕಾರದಿಂದ ಅತ್ಯುತ್ತಮ ಪಟ್ಟಿಯನ್ನು ತಯಾರಿಸಲು ಸಹಕಾರವಾಗುತ್ತದೆ ಎಂದರು.
ಮುಂಬರುವ ಲೋಕಸಭೆ ಚುನಾವಣೆ-2024 ರ ಪೂರ್ವಭಾವಿ ತಯಾರಿ ಆರಂಭವಾಗಿದ್ದು, ಇಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮತದಾರರು ತಮ್ಮ ಗುರುತಿನ ಚೀಟಿಯಲ್ಲಿ ತಪ್ಪುಗಳಿದ್ದಲ್ಲಿ ಇಂದಿನಿಂದ ಡಿ.9ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು 2024ರ ಜ.5 ರಂದು ಪ್ರಕಟಿಸಲಾಗುವುದು.
ಕರಡು ಮತದಾರರ ಪಟ್ಟಿಯನ್ನು ಪಿಡಿಎಫ್ ಮಾದರಿಯಲ್ಲಿ https://ceo.karnataka.gov.in/en ರಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಹೆಸರುಗಳನ್ನು ಪರಿಶೀಲಿಸಕೊಳ್ಳಬಹುದಾಗಿದೆ, ತಪ್ಪುಗಳಿದ್ದಲ್ಲಿ ಅಥವಾ ಹೆಸರು ಬಿಟ್ಟು ಹೋಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಬಹುದಾಗಿದೆ.
ಈ ಹಿಂದೆ ವರ್ಷಕ್ಕೊಮ್ಮೆ ಮಾತ್ರ 18 ವರ್ಷ ತುಂಬಿದ ಯುವ ಮತದಾರರಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಕಳೆದ ವರ್ಷದಿಂದ ವರ್ಷದಲ್ಲಿ ನಾಲ್ಕು ಅವಕಾಶಗಳನ್ನು ನೀಡಲಾಗಿದೆ. ಯುವ ಹಾಗೂ ಹೊಸ ಮತದಾರರ ನೋಂದಣಿಗಾಗಿ ನ.18 ಮತ್ತು 19 ಹಾಗೂ ಡಿ.02 ಮತ್ತು 03 ರಂದು ಶನಿವಾರ ಹಾಗೂ ಭಾನುವಾರಗಳಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಳಮಟ್ಟದಲ್ಲಿ ಮತದಾರರ ಮಾಹಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿದಿಗಳು ಚೆನ್ನಾಗಿ ಅರಿತಿರುತ್ತಾರೆ, ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಮತದಾರರ ಗುರುತಿನ ಚೀಟಿಗಳಲ್ಲಿ ಸಮಸ್ಯೆಗಳಿದ್ದಲ್ಲಿ, ವಿಳಾಸ ಬದಲಾದಲ್ಲಿ ಅಥವಾ ಹೊಸದಾಗಿ ಸೇರಿಸುವುದು ಸೇರಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಈಗ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಲ್ಲಿ ಚುನಾವಣಾ ಸಮಯದಲ್ಲಿ ಸಮಸ್ಯೆಗಳು ಉದ್ಭವಿಸುವುದಿಲ್ಲ, ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಮತದಾರರ ಕರಡು ಪಟ್ಟಿ ಪ್ರಕಟ
ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.27: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಇಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳು ಹಾಗೂ ಈ ವ್ಯಾಪ್ತಿಗೆ ಒಳಪಡುವ ಎಲ್ಲಾ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಇಂದಿನಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯು ಆರಂಭಗೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ಕುಮಾರ್ ಮೀನಾ ಅವರು, 2024ರ ಕರಡು ಮತದಾರರ ಪಟ್ಟಿ ಪ್ರಕಾರ , ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,33,77,162 ಮಂದಿ ಇದ್ದಾರೆ. ಇದರಲ್ಲಿ 2,68,02,838 ಪುರುಷ ಮತದಾರ, 2,65,69,428 ಮಹಿಳಾ ಮತದಾರರು ಇದ್ದಾರೆ. 4,896 ಇತರೆ ಮತದಾರರು ಹಾಗೂ 47,172 ಸೇವಾ ಮತದಾರರು ಇದ್ದಾರೆ. 2023ರ ಅಂತಿಮ ಮತದಾರರ ಪಟ್ಟಿ ಪ್ರಕಾರ 5,08,53,84 ಮತದಾರರು ಇದ್ದರು ಎಂದು ಹೇಳಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ 7,06,207 ಮತದಾರರು ಇದ್ದು ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ಅತಿ ಕಡಿಮೆ 1,66,907 ಮತದಾರರು ಇದ್ದಾರೆ. ಶೇ.100ರಷ್ಟು ಭಾವಚಿತ್ರ ಮತ್ತು ಮತದಾರರ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಲಾಗಿದೆ ಎಂದು ಹೇಳಿದರು.
ಮಹಿಳಾ ಮತದಾರರೇ ಹೆಚ್ಚು:
224 ವಿಧಾನಸಭಾ ಕ್ಷೇತ್ರಗಳ ಪೈಕಿ 115 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚಿದ್ದರೆ, ಮಹದೇವಪುರ ಕ್ಷೇತ್ರದಲ್ಲಿ ಅತೀ ಕಡಿಮೆ(859) ಮತದಾರರು ಇದ್ದಾರೆ. ಇಪಿ ಮತದಾರರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ ಶೇ.93.9ರಷ್ಟು , ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಶೇ.47.45ರಷ್ಟು ಕಡಿಮೆ ಇದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಮತದಾರರು ಇದ್ದರೆ, ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾರರು ಇದ್ದಾರೆ ಎಂದರು.
ಮತದಾರರು ತಮ್ಮ ಆಧಾರ್ ಜೋಡಣೆ ನೀಡುವುದು ಕಡ್ಡಾಯವಲ್ಲ ಅದು ಐಚ್ಛಿಕ ಎಂದು ಸ್ಪಷ್ಪಪಡಿಸಿದರು.