ಬೆಂಗಳೂರು, ಜೂ.28: ಬೆಂಗಳೂರಿನ 10 ಕಡೆಗಳಲ್ಲಿ ಸೇರಿ ರಾಜ್ಯದಾದ್ಯಂತ ಏಕಕಾಲಕ್ಕೆ 15 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೋಟಿ ಕೋಟಿ ಮೌಲ್ಯದ ಹಣ, ಆಸ್ತಿ ಪತ್ರಗಳು, ಬಂಗಾರ ಸಹಿತ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ತಂಡ 15 ಭ್ರಷ್ಟ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಅವರ ಮನೆ, ಕಚೇರಿ, ತೋಟಗ ಹೀಗೆ ಒಟ್ಟಾರೆ 62 ಕಡೆಗಳಲ್ಲಿ ದಾಳಿ ನಡೆಸಿದೆ. ಒಬ್ಬೊಬ್ಬ ಅಧಿಕಾರಿ ಬಳಿಯ ಅಕ್ರಮ ಸಂಪತ್ತುಗಳನ್ನು ಕಂಡು ಜನ ಬೆರಗಾಗಿದ್ದಾರೆ.
ಬೆಂಗಳೂರಿನ ಕೆ.ಆರ್. ಪುರಂ ತಾಲ್ಲೂಕು ತಹಶೀಲ್ದಾರ್ ಅಜಿತ್ ಕುಮಾರ್ಗೆ ಸಂಬಂಧಿಸಿದ 11 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಅಪಾರ ಪ್ರಮಾಣದ ಅಕ್ರಮ ಆಸ್ತಿಗಳು ಕಂಡಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಅಜಿತ್ ಕುಮಾರ್ ರೈ ಮನೆ ಮೇಲೆ ನಡೆದ ದಾಳಿ ವೇಳೆ 40 ಲಕ್ಷ ರೂ. ನಗದು ಸಹಿತ 1.90 ಕೋಟಿ ಮೌಲ್ಯದ ಹಣ ಪತ್ತೆಯಾಗಿದೆ. ಇದಲ್ಲದೆ, ವಿವಿಧೆಡೆ 100ಕ್ಕೂ ಅಧಿಕ ಎಕರೆಯಷ್ಟು ಬೇನಾಮಿ ಹೆಸರುಗಳಲ್ಲಿರುವ ಕೃಷಿ ಭೂಮಿಗೆ ಸಂಬಂಧಿಸಿದ ಆಸ್ತಿ ಪತ್ರಗಳು ಸಿಕ್ಕಿವೆ. ಜೊತೆಗೆ 4 ಫಾರ್ಚೂನರ್, 4 ಥಾರ್, 1 ಲ್ಯಾಂಡ್ ಕ್ರೂಸರ್ ಹಾಗೂ ಬಹು ದುಬಾರಿಯ ವಿದೇಶಿ ಮದ್ಯ ಬಾಟಲಿಗಳು ಪತ್ತೆ ಆಗಿದೆ.
ಕೃಷಿ ನಿರ್ದೇಶಕಿ ಮನೆಯಲ್ಲಿ ಆಮೆಗಳು:
ಬಾಗಲಕೋಟೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಮನೆ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು 32 ಲಕ್ಷ ನಗದು, ಚಿನ್ನಾಭರಣ, 31 ವ್ಯಾನಿಟಿ ಬ್ಯಾಗ್, ಬೆಳ್ಳಿ ಫ್ರೇಮ್ ಇರುವ ಫೋಟೋ, 10ಕ್ಕೂ ಹೆಚ್ಚು ಲಗೇಜ್ ಬ್ಯಾಗ್, ಚಿನ್ನದ ಬಳೆ, ಸರ, ಎರಡು ಆಮೆಗಳು ಪತ್ತೆ ಆಗಿವೆ.
ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರುಗೆ ಸೇರಿದ 4 ಕಡೆ ದಾಳಿ ಮಾಡಲಾಗಿದ್ದು, 71.88 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಆಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಒಟ್ಟು 4 ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಜಿಲ್ಲಾ ನಿರ್ಮಿತಿ ಕೇಂದ್ರಗಳ ಯೋಜನಾ ವ್ಯವಸ್ಥಾಪಕ ಗಂಗಾಧರ್ ಮನೆ, ಹೋಟೆಲ್, ಹೆಂಡತಿಯ ಹೆಸರಿನಲ್ಲಿ ನಡೆಸುತ್ತಿದ್ದ ಪೆಟ್ರೋಲ್ ಬಂಕ್ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಕೋಟ್ಯಂತರ ಮೌಲ್ಯದ 16 ನಿವೇಶನಗಳು, ಎರಡು ಮನೆಗಳು ದಾಖಲೆ ಪತ್ರ, 1 ರೆಸಾರ್ಟ್, ಚಿನ್ನ ಬೆಳ್ಳಿ ಸಿಕ್ಕಿದೆ. ಒಟ್ಟು 3.76 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಆಗಿದೆ.
ಮುದ್ದೇಬಿಹಾಳದ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಜಿನ್ನಪ್ಪ ಪದ್ಮಣ್ಣ ಅವರ ಮನೆಯಲ್ಲಿ 1.42 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಪಿಡಬ್ಲ್ಯೂಡಿ ಬಸವನಬಾಗೇವಾಡಿ ಉಪವಿಭಾಗದ ಜೂನಿಯರ್ ಎಂಜಿನಿಯರ್ ಭೀಮನಗೌಡ ಮಲ್ಲನಗೌಡ ಬಿರಾದರ್ ಅವರಿಂದ 1.90 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ.
ತುಮಕೂರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ರವಿ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಒಟ್ಟಾರೆ 4.27 ಕೋಟಿ ಮೌಲ್ಯದ ಆಸ್ತಿ ಜಪ್ತ ಮಾಡಿದ್ದರೆ, ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಇಇ ಶೇಖರ ಹನುಮಂತ ಬಹುರೂಪಿ ಅವರ ಮನೆಯಲ್ಲಿ 3 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಗಳನ್ನು ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ.
ಕೋಲಾರದಲ್ಲಿ ಕೆಆರ್ಇಡಿಎಲ್ ಎಇಇ ಕೋದಂಡರಾಮಯ್ಯ ಅವರ ಮನೆ ಸೇರಿ ಆರು ಕಡೆ ದಾಳಿ ಮಾಡಿ, 2.47 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ರಾಯಚೂರಿನಲ್ಲಿ ನಗರ ಹಾಗೂ ಗ್ರಾಮೀಣ ನೀರು ಯೋಜನಾ ಘಟಕದ ಅಧಿಕಾರಿ ಶರಣಪ್ಪ ಮಡಿವಾಳ ಅವರ ಸಿಂಧನೂರು ಮನೆ, ಕಲಬುರಗಿಯಲ್ಲಿರುವ ಫಾರಂ ಹೌಸ್ ಮೇಳೆ ದಾಳಿ ನಡೆಸಲಾಗಿದ್ದು, 14 ಲಕ್ಷ ರೂ. ನಗದು ಸೇರಿ 2.03 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಎಲ್ಲಾ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ಅಕ್ರಮ ಆಸ್ತಿಗಳ ಶೋಧ ಮುಂದುವರಿಸಿದ್ದಾರೆ.