ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.30: ಲೋಕಾಯುಕ್ತ ಅಧಿಕಾರಿಗಳು ಸೋಮವಾರ ರಾಜ್ಯದ ವಿವಿಧೆಡೆ 75 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದಾರೆ. ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ, ಅಕ್ರಮ ಆಸ್ತಿಗಳ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿ ಸೇರಿ ತುಮಕೂರು, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ಕಲಬುರ್ಗಿ, ರಾಯಚೂರು ಸೇರಿದಂತೆ 15 ಜಿಲ್ಲೆಗಳಲ್ಲಿ 75 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ಭ್ರಷ್ಟರ ಮನೆ ಬಾಗಿಲು ತಟ್ಟಿದ್ದಾರೆ. ಅಧಿಕಾರಿಗಳ ನಿವಾಸಗಳು, ಫಾರಂ ಹೌಸ್, ಸಂಬಂಧಿಕರ ಮನೆಗಳಿಗೂ ಲಗ್ಗೆ ಇಟ್ಟು ಅಕ್ರಮ ಆಸ್ತಿಗಳನ್ನು ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಬಿಎಂಪಿ ಎಆರ್ಓ ಚಂದ್ರಪ್ಪ ಬಿರಜ್ಜನವರ್ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಚಂದ್ರಪ್ಪ ಅವರ ಮನೆ, ಕಚೇರಿ ಸೇರಿ ಮೂರು ಕಡೆ ದಾಳಿ ನಡೆಸಲಾಗಿದೆ. ಈ ಹಿಂದೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದರು. ಅದರ ಮುಂದುವರಿದ ಭಾಗವಾಗಿ ದಾಳಿ ಮುಂದುವರಿಸಿರೋ ಲೋಕಾಯುಕ್ತ ಪೊಲೀಸರು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಫಾರ್ಮ್ ಹೌಸ್ ಮೇಲೆ ದಾಳಿ
ಮಂಡ್ಯದಲ್ಲೂ ಲೋಕಾಯುಕ್ತ ದಾಳಿ ನಡೆದಿದ್ದು, ಇಬ್ಬರು ಅಧಿಕಾರಿಗಳ ಫಾರ್ಮ್ ಹೌಸ್ ಮೇಲೆ ರೈಡ್ ಮಾಡಲಾಗಿದೆ. ಕೊಳಚೆ ನಿರ್ಮೂಲನೆ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಬಾಲರಾಜ ಅವರ ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ.
ನಗರಾಭಿವೃದ್ಧಿ ಇಲಾಖೆಯ ಶಶಿಕುಮಾರ್ ಅವರ ಮದ್ದೂರು ತಾಲೂಕಿನ ತೈಲೂರು ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. ಇಬ್ಬರು ಅಧಿಕಾರಿಗಳು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ ಪಿ ಸಜೀತ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.
ಕಂತೆ ಕಂತೆ ಹಣ ಪತ್ತೆ:
ನಿದ್ದೆಗಣ್ಣಿನಲ್ಲಿದ್ದ ಬೆಳಗಾವಿಯ ಇಬ್ಬರು ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ. ಬೆಳಗಾವಿಯ ಪಂಚಾಯತ್ ರಾಜ ಇಲಾಖೆ ಎಇಇ ಎಂ.ಎಸ್.ಬಿರಾದಾರ್ಗೆ ಸೇರಿದ ಬೆಳಗಾವಿ ನಿವಾಸ, ಕಿತ್ತೂರು, ಖಾನಾಪುರದಲ್ಲಿ ಇರೋ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಮತ್ತೊಂದೆಡೆ ಕಲಬುರಗಿ ಜಿಲ್ಲೆಯ ಟೌನ್ ಪ್ಲ್ಯಾನರ್ ಅಪ್ಪಾಸಾಹೇಬ್ ಕಾಂಬಳೆ ಮನೆ ಮೇಲೂ ದಾಳಿ ನಡೆಸಿ, ರಾಮತೀರ್ಥ ನಗರದ ನಿವಾಸ, ಆಟೋ ನಗರದಲ್ಲಿ ಇರೋ ಕಾರ್ಖಾನೆ ಮೇಲೆ ದಾಳಿ, ಶೋಧ ಕಾರ್ಯಾಚರಣೆ ನಡೆಸಲಾಗಿದೆ. ದಾಳಿ ವೇಳೆ ಕಂತೆ ಕಂತೆ ಹಣ, ಅಪಾರ ಪ್ರಮಾಣದ ದಾಖಲೆಗಳು ಪತ್ತೆಯಾಗಿದೆ.
ದಾವಣಗೆರೆಯಲ್ಲಿ ಕೈಗಾರಿಕೆ ಮತ್ತು ಸುರಕ್ಷತಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಮನೆ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಬೆಂಗಳೂರು ಹಾಗೂ ಅವರ ಸ್ವಂತ ಊರಾದ ಕೊಳ್ಳೆಗಾಲ ಸೇರಿದಂತೆ ಒಟ್ಟು ಮೂರು ಕಡೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗದೆ. ಬೆಂಗಳೂರಿನ ಉಪಕಾರ್ ಲೇಔಟ್, ಆಂಧ್ರಹಳ್ಳಿ , ಕೊಳ್ಳೆಗಾಲ ಮನೆಯಲ್ಲಿ ಶೋಧ ನಡೆಸಲಾಗಿದೆ. ಬ್ಯಾಡರಹಳ್ಳಿ ತಂದೆಯ ಮನೆ, ಬಿಇಎಲ್, ವಿನಾಯಕ ನಗರ ಸೇರಿದಂತೆ ವಿವಿದೆಢೆ ದಾಳಿ ವೇಳೆ 8 ಲಕ್ಷ ನಗದು ಹಣ, ಹತ್ತು ದುಬಾರಿ ಬೆಲೆಯ ವಾಚ್ಗಳು, ಎಂಟು ಕೂಲಿಂಗ್ ಸನ್ ಗ್ಲಾಸ್ಗಳು, ಚಿನ್ನ ಬೆಳ್ಳಿ ವಸ್ತುಗಳು, ಎರಡು ಕಾರು, ಆಸ್ತಿ ಪತ್ರಗಳು ಪತ್ತೆಯಾಗಿದೆ.
ಹಾಸನದ ಕೆಪಿಟಿಸಿಎಲ್ ಜೂನಿಯರ್ ಎಂಜಿನಿಯರ್ ಎಚ್.ಇ.ನಾರಾಯಣ ಅವರ ಮನೆ ಹಾಗೂ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನ ಹೊರವಲಯದ ಬೊಮ್ಮನಾಯಕನಹಳ್ಳಿರುವ ನಾರಾಯಣ ಅವರ ನಿವಾಸ ಹಾಗೂ ಗೊರೂರಿನಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ 9 ಕಡೆ ದಾಳಿ ನಡೆದಿದ್ದು ಹಾವೇರಿ ಪ್ರಾದೇಶಿಕ ಅರಣ್ಯಾಕಾರಿ ಮೇಶಪ್ಪ ಪೇರಲನವರ್ ಹಾಗು ನ್ಯಾಮತಿ ಪ್ರಾದೇಶಿಕ ಅರಣ್ಯಾಧಿಕಾರಿ ಮಾಲತೇಶ್ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅವರ ಮನೆ ,ಕಚೇರಿ ಮೇಲೆ 20ಕ್ಕೂ ಹೆಚ್ಚು ಸಿಬ್ಭಂದಿ ದಾಳಿ ಮಾಡಿದ್ದಾರೆ.
ಕಾರವಾರ ಜಿಲ್ಲೆ ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಗ್ರಾಮದಲ್ಲಿರುವ ಉಡುಪಿಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ರಾಜೇಶ ಹಮ್ಮಣ್ಣ ನಾಯಕ ಅವರ ಮೂಲ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಸೋಮವಾರ ಬೆಳಿಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಅಧಿಕಾರಿಯ ಪಾಲಕರು ವಾಸವಿರುವ ಈ ಮನೆಗೆ ತೆರಳಿದ ಅಧಿಕಾರಿಗಳು ದಾಖಲೆ ಪತ್ರಗಳನ್ನು ಪರಿಶೀಲಿಸಿದರು.