ಸುದ್ದಿಮೂಲ ವಾರ್ತೆ
ಕೆ.ಆರ್.ಪುರ, ನ.25: ದೇಶಿಯ ಕ್ರೀಡೆಯಾದ ಖೋ ಖೋ ಆಟವನ್ನು ಉಳಿಸಿ ಬೆಳೆಸುವ ಮೂಲಕ ಪ್ರೋತ್ಸಾಹ ನೀಡಬೇಕಿದೆ ಎಂದು ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್ ತಿಳಿಸಿದರು.
ಮಹದೇವಪುರದ ಕ್ಷೇತ್ರದ ಗುಂಜೂರಿನ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಗುಂಜೂರು ಖೋ-ಖೋ ಸ್ಪೋರ್ಟ್ಸ್ ಕ್ಲಬ್, ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಅತಿ ಕಿರಿಯ ಬಾಲಕ ಬಾಲಕಿಯರ ಹೊನಲು ಬೆಳಕಿನ ಅಂತರ ರಾಷ್ಟ್ರೀಯ ಖೋ ಖೋ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಖೋ ಖೋ ದೇಶಿ ಕ್ರೀಡೆಯಾಗಿದ್ದು ರಾಷ್ಟ್ರ ಹಾಗೂ ಅಂತರಾಷ್ಟೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಕ್ರೀಡಾಕೂಟಗಳು ದೇಹ ಮತ್ತು ಮನಸ್ಸು ಒಂದುಗೂಡಿಸುವ ಕೆಲಸ ಮಾಡುತ್ತವೆ. ಕ್ರೀಡಾಪಟುಗಳು ವ್ಯಸನಿಗಳಾಗದೆ ಪ್ರತಿಯೊಬ್ಬರು ಚಾರಿತ್ರ್ಯವಂತರಾಗಬೇಕು ಎಂದರು.
ಬೆಂಗಳೂರು ನಗರ ಜಿಲ್ಲಾ ಖೋ-ಖೋ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಆರ್.ಜಯರಾಂ, ರಾಜ್ಯದ ವಿವಿಧ ಭಾಗಗಳಿಂದ 107 ಕ್ಕೂ ಹೆಚ್ಚು ತಂಡಗಳು 1200 ಕ್ಕೂ ಹೆಚ್ಚು ಮಕ್ಕಳು ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ನಾಗೇಶ್, ಖೋ-ಖೋ ಸಂಸ್ಥೆಯ ಕಾರ್ಯದರ್ಶಿ ಆರ್.ಮಲ್ಲಿಕಾರ್ಜುನಯ್ಯ, ಮುಖಂಡರಾದ ಜಿ.ಟಿ.ನಾಗೇಶ್, ಶ್ರೀನಿವಾಸ್, ಜಿ.ಎಂ.ಬಸವರಾಜ್, ರಾಮಕೃಷ್ಣಪ್ಪ , ವಾಸು, ಜಿ.ಬಿ.ಮುನಿರಾಜ್ ಇದ್ದರು.