ಸುದ್ದಿಮೂಲ ವಾರ್ತೆ
ತುಮಕೂರು, ಮಾ.28: ಪೌರಕಾರ್ಮಿಕರು ಹಣದ ಆಸೆಗೆ ಒಳಗಾಗಿ ಮ್ಯಾನ್ಹೋಲ್ ಚೇಂಬರ್ ಒಳಗೆ ಇಳಿಯಬಾರದು ಹಾಗೂ ಪೌರಕಾರ್ಮಿಕರು ತಮ್ಮ ಸುರಕ್ಷತೆ ಬಗ್ಗೆ ಹೆಚ್ಚು ಗಮನಹರಿಸಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಇವರ ಸಹಯೋಗದಲ್ಲಿ ಸಫಾಯಿ ಕರ್ಮಚಾರಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಎಂ.ಎಸ್ ಕಾಯ್ದೆ 2013ರಂತೆ ಸಫಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸೋಮವಾರ ನಗರದ ಜಿಲ್ಲಾ ಬಾಲ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರು ಕೆಲಸ ಮಾಡುವ ಸಮಯದಲ್ಲಿ ಕೈಗಳಿಗೆ ಹ್ಯಾಂಡ್ ಗ್ಲೌಜ್ ಹಾಗೂ ಶೂ ಗಳನ್ನು ಧರಿಸಬೇಕು. ಪೌರಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಉದ್ದೇಶವೆಂದರೆ ಅವರ ಮಕ್ಕಳು ಸಹಾ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ತೆಗೆದುಕೊಳ್ಳಬೇಕು. ಚಾಲಕರನ್ನು ನೇರ ಪಾವತಿಯ ಮೂಲಕ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಕೆಲಸ ಮಾಡುವ ಪೌರ ಕಾರ್ಮಿಕರು ನೆಮ್ಮದಿಯಾಗಿ ಕುಳಿತುಕೊಂಡು ತಿಂಡಿ ಮಾಡಲು ಸ್ಥಳ ಸಿಗುವುದಿಲ್ಲ ಆದ್ದರಿಂದ ಅವರಿಗಾಗಿ ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ದಯಾನಂದ ಅವರು ಮಾತನಾಡಿ, ಪೌರಕಾರ್ಮಿಕರು ಕೆಲಸದ ಜೊತೆ ತಮ್ಮ ಆರೋಗ್ಯದ ಕಡೆಯು ಗಮನ ಕೊಡಬೇಕು ಹಾಗೂ ಕಾಲ ಕಾಲಕ್ಕೆ ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಕೆಲಸದ ಸಮಯದಲ್ಲಿ ಹೆಚ್ಚಿನದಾಗಿ ನೀರನ್ನು ಕುಡಿಯುವುದರಿಂದ ಯಾವುದೇ ಕಾಯಿಲೆಗಳು ಬರುವುದಿಲ್ಲ ಎಂದರಲ್ಲದೆ ಕಾರ್ಮಿಕರು ಹೆಚ್ಚಾಗಿ ಗುಟ್ಕಾ ಹಾಗೂ ಮದ್ಯಪಾನ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಮಹಾನಗರ ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಸ್.ಕೃಷ್ಣಪ್ಪ, ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಅಂಜನಪ್ಪ, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್. ಮಂಜುನಾಥ್ ಹಾಗೂ ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿಯ ಸದಸ್ಯ ಕದುರಪ್ಪ ಉಪಸ್ಥಿತರಿದ್ದರು.