ಪಿ.ಪರಮೇಶ
ಬದುಕು ಜಟಕಾ ಬಂಡಿ. ವಿಧಿ ಅದರ ಸಾಹೇಬ ಆ ಬದುಕು ವಿಧಿಯ ಕೈವಶವಾಗುವ ಮುನ್ನವೇ ಏನನ್ನಾದರೂ ಸಾಧಿಸಬೇಕು. ನೂರು ಜನ ಮೈಚ್ಚುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಹತ್ತು ಹಲುವು ದಾರಿಗಳಿವೆ. ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ, ವೈಚಾರಿಕವಾಗಿ ನಾವು ಬೆಳೆದು ನಮ್ಮ ಸುತ್ತಮುತ್ತಲಿನ ಸಮಾಜವನ್ನು ವೈಚಾರಿಕವಾಗಿ ಜಾಗೃತವಾಗುವಂತೆ ಮಾಡಬೇಕು ಎನ್ನುವ ಮನೋಭಾವ ಹೊಂದಿರುವ ಹಾಗೂ ಇಂತಹ ಅರ್ಥಪೂರ್ಣ ಕಾರ್ಯ ಸಾಧನೆ ಮಾಡಿದ ಮಹನೀಯರಲ್ಲಿ ಒಬ್ಬರಾದ ಮಾನ್ವಿಯ ಬಹುಮುಖ ಪ್ರತಿಭೆಯ ಸಾಧಕಿ, ಸಾಹಿತಿ ಹಾಗೂ ಕವಯತ್ರಿ ಶ್ರೀಮತಿ ಮಧುಕುಮಾರಿ ಪಾಂಡೆ ಒಬ್ಬರು.
ವೃತ್ತಿಯಲ್ಲಿ ಶಿಕ್ಷಕಿಯಾದರೂ (ಈಗ ನಿವೃತ್ತಿ) ಪ್ರವೃತ್ತಿಯಲ್ಲಿ ಸಾಹಿತಿ. ಇವರು ತಮ್ಮ ಹವ್ಯಾಸಗಳ ಮೂಲಕ ಜಿಲ್ಲೆಯ ಯಾವ ಮೂಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ, ವಿಚಾರ ಸಂಕಿರಣ ಕಾರ್ಯಕ್ರಮಗಳು ನಡೆಯಲಿ ಅಲ್ಲಿ ಮಧು ಕುಮಾರಿ ಪಾಂಡೆಯವರ ಹಾಜರಿ ಎದ್ದು ಕಾಣುತ್ತದೆ. ವೇದಿಕೆಯ ಮೇಲೇರಿ ವಿಚಾರ ಮಂಡಿಸುವದು ಎಷ್ಟು ಪ್ರಿಯವೋ, ಅದಕ್ಕೂ ಹೆಚ್ಚು ಪ್ರಿಯವಾದದು ವೇದಿಕೆಯ ಮುಂಭಾಗದಲ್ಲಿ ಜನ ಸಾಮಾನ್ಯರ ನಡುವೆ ಕುಳಿತು ಕಾರ್ಯಕ್ರಮದ ರಸಸ್ವಾದವನ್ನು ಅಸ್ವಾದಿಸುವುದು ಇವರ ಉತ್ತಮ ಹವ್ಯಾಸ.
ಬಾಬುಪ್ರಸಾದ ಮತ್ತು ಸಾವಿತ್ರಿಬಾಯಿ ಇವರ ಸುಪುತ್ರಿ ಮಧುಕುಮಾರಿ ಪಾಂಡೆ 1954 ಮಾರ್ಚ್ 22 ರಂದು ಮಾನ್ವಿಯಲ್ಲಿ ಜನಿಸಿದರು. ಪ್ರಾಥಮಿಕ ಹಂತದಿಂದ ಪಿಯುಸಿವರೆಗೆ ಮಾನ್ವಿಯಲ್ಲಿ ಶಿಕ್ಷಣ ಪಡೆದರು. ಅಂದಿನ ಔರಂಗಬಾದಿನ ಗಣ್ಯ ವಕೀಲರಾದ ಗೋವಿಂದ ಪ್ರಸಾದರೊಂದಿಗೆ ಮಧುಕುಮಾರಿ ಪಾಂಡೆಯವರ ವಿವಾಹವಾಯಿತು. ಸಂದೀಪ ಕುಮಾರ ಮತ್ತು ನಿವೇದಿತಾ ಎಂಬ ಇಬ್ಬರು ಮಕ್ಕಳಿಗೆ ಜನ್ಮಕೊಟ್ಟ ಇವರಿಗೆ ಶಿಕ್ಷಣದ ಬಗ್ಗೆ ಇದ್ದ ಆಸಕ್ತಿ ಹೆಚ್ಚುತ್ತಲೇ ಇತ್ತು. ಇದರ ಪರಿಣಾಮವಾಗಿ ಶಿಕ್ಷಕ ವೃತ್ತಿಗೆ ಬೇಕಾದ ಶಿಕ್ಷಕರ ತರಬೇತಿಯನ್ನು ಪಡೆದು ಕೊಂಡರು ಅಂದಿನ ಕಾಲದಲ್ಲಿ ಮಹಿಳೆಯರು ಹೊಸ್ತಿಲು ದಾಟಬಾರದೆಂಬ ಮನೋಭಾವದ ಮಧ್ಯೆಯೇ ಸ್ವಾಭಿಮಾನಿಯಾಗಿ ಶಿಕ್ಷಕ ವೃತ್ತಿ ಪಡೆದು, ಮಕ್ಕಳ ವಿದ್ಯಾಭ್ಯಾಸದಲ್ಲಿ ಶ್ರಮ ವಹಿಸಿದರು. ಶಿಕ್ಷಣದ ಬಗ್ಗೆ ಹೆಚ್ಚಿನ ಅಭಿರುಚಿ ಇಟ್ಟುಕೊಂಡಿದ್ದ ಇವರು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ಹಿಂದಿ ವಿಷಯದಲ್ಲಿ ಎಂ.ಎ ಪದವಿ ಪಡೆದರು. ನಂತರ ಬಿ.ಎಡ್ ಪದವಿ ಪಡೆದು ಪ್ರೌಢಶಾಲೆಗೆ ಬಡ್ತಿ ಹೊಂದಿ ವಯೋಮಾನಕ್ಕೆ ತಕ್ಕಂತೆ ನಿವೃತ್ತಿಯಾದರು.
ಸಾಹಿತ್ಯ, ಕಲೆ, ನಾಟಕದ ಬಗ್ಗೆ ಅಭಿರುಚಿ ಹೊಂದಿರುವ ಇವರು ಕನ್ನಡ ಸಾಹಿತ್ಯ ಪರಿಷತ್ತು, ಶಿಕ್ಷಕರ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರತಿ ವರ್ಷ ಶಿಕ್ಷಕರ ಕಲ್ಯಾಣ ನಿಧಿಯಿಂದ ಜರಗುವ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಗಾರದಲ್ಲಿ ಭಾಗವಹಿಸಿ ಕಸದಲ್ಲಿ ರಸ ತೆಗೆಯುವ ಕಾರ್ಯದಲ್ಲಿ ಯಶಸ್ವಿ ಪಡೆದಿದ್ದಾರೆ. ಇವರು ನಾಟಕದ ಜೊತೆ, ನೃತ್ಯದಲ್ಲಿಯೂ ಕೂಡಾ ಪಾರಂಗತರಾಗಿದ್ದಾರೆ.
ಇವರು ದ್ವಿಭಾಷಾ ಸಾಹಿತಿಗಳು. ಕನ್ನಡದಲ್ಲಿ ನಗೆಮುತ್ತುಗಳು, ನೆರಳು ಎಂಬ ಸಂಕಲನ, ಬರೆದು ಪ್ರಕಟಿಸಿದ್ದಾರೆ. ಚಿಂತನಗಂಗಾ ಎಂಬ ಚಿಂತನೆಗಳ ಸಂಗ್ರಹ ಪುಸ್ತಕ ಪ್ರಕಟಿಸಿದ್ದಾರೆ. ಹಿಂದಿಯಲ್ಲಿ ಶಾಯರಿಗಳು ಮತ್ತು ಹಿಂದಿ ವ್ಯಾಕರಣ ಎಂಬ ಪುಸ್ತಕಗಳನ್ನು ರಚಿದ್ದಾರೆ.
ಅಖಿಲ ಭಾರತ ಕವಿತ್ರಿಯರ ಸಂಘದ ವತಿಯಿಂದ ಕೊಲ್ಲಾಪುರ, ಹೈದ್ರಾಬಾದ್, ದೆಹಲಿ ಮುಂತಾದ ಕಡೆ ಕಾವ್ಯ ವಾಚನ ಮಾಡಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ತಮ್ಮ ಸ್ವರಚಿತ ಕವನಗಳನ್ನು ಮಂಡಿಸುತ್ತಲೇ ಇರುತ್ತಾರೆ. ಈ ಟಿ.ವಿ, ಉದಯ ಟಿ.ವಿ. ಮುಂತಾದ ದೂರದರ್ಶನ ವಾಹಿನಿಗಳಲ್ಲಿ, ಬಾನುಲಿಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭ ಪ್ರದರ್ಶಿಸಿದ್ದಾರೆ. ಈ.ಟಿ ವಿಯಲ್ಲಿ ಪರಿಪೂರ್ಣ ಮಹಿಳೆ ಎಂಬ ಕಾರ್ಯಕ್ರಮದಡಿಯಲ್ಲಿ ರಾಯಚೂರು ಜಿಲ್ಲೆಯಿಂದ ಆಯ್ಕೆಗೊಂಡಿದ್ದರು. ಉದಯ ಟಿವಿಯಲ್ಲಿ ಕಾವ್ಯ ಪ್ರತಿಭೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾರೆ. ಚಂದನ ಟಿವಿಯಲ್ಲಿ ಕಸಾಪ ವತಿಯಿಂದ ನಡೆದ ಕಾವ್ಯಸ್ವರಚಿತ ಕವನ ನಿವೇದಿಸಿದ್ದಾರೆ. ಪ್ರಸ್ತುತ ಕರ್ನಾಟಕ ಲೇಖಕಿಯರ ಸಂಘಕ್ಕೆ ರಾಯಚೂರು ಜಿಲ್ಲೆಗೆ ಸಂಘಟನಾ ಮುಂದಾಳು ಆಗಿದ್ದಾರೆ. ಎಲ್ಲಾ ರಕ್ತಗಳಿಗೆ ಹೊಂದಾಣಿಕೆಯಾಗುವ ಇವರ ಓ ಪಾಜಿಟಿವ್ `ರಕ್ತವನ್ನು ಅನೇಕ ಶಿಬಿರಗಳಲ್ಲಿ ರಕ್ತದಾನ ಮಾಡಿದ್ದಾರೆ. ನೇತ್ರದಾನ, ಮತ್ತು ದೇಹದಾನ ಮಾಡುವ ಬಗ್ಗೆ ಘೋಷಣೆ ಪತ್ರ ನೀಡಿದ್ದಾರೆ.
ಪ್ರಮುಖ ಪತ್ರಿಕೆಗಳಲ್ಲಿ ಸಾಕಷ್ಟು ಬರಹಗಳು, ಬಿಡಿ ಲೇಖನಗಳು ಆಗಾಗ್ಗೆ ಪ್ರಕಟವಾಗುತ್ತಲೇ ಇರುತ್ತವೆ. ದೀಪಾವಳಿ ವಿಶೇಷಾಂಕಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ ಹಿರಿಯ ನಾಗರಿಕರ ಆಟೋಟ ಮತ್ತು ಪ್ರಬಂಧ ಸ್ವಧೆಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಹಸನ್ಮುಖಿ ಸದಾ ಸುಖಿ ಇದು ಇವರ ಜೀವನ ಮಂತ್ರವಾಗಿದೆ. ಇವರು ದ್ವಿಭಾಷಾ ಸಾಹಿತಿಗಳು, ಇವರ ನಗೆ ಮುತ್ತುಗಳು, ನಗೆ ಹನಿಗಳ ಸಂಗ್ರಹ ಓದುಗರ ಮನದ ದುಗುಡನ್ನು ನಿವಾರಿಸಿ ಚೈತನ್ಯ ನೀಡುತ್ತದೆ.
ಮಧು ಪಾಂಡೆಯವರ ಸಾಹಿತ್ಯದ ವೈಚಾರಿಕತೆಯನ್ನು ಸವಿಯಬಹುದಾದ ಕೃತಿ ‘ನೆರಳು’ ಕವನ ಸಂಕಲನ 25 ಕವಿತೆಗಳ ಸಂಕಲದ ಕೃತಿ. ವ್ಯಕ್ತಿಯ ವೈಯಕ್ತಿಕ ತುಮುಲಗಳನ್ನು ಎತ್ತಿ ತೋರಿಸುವಂತೆ ಗಾಂಧಿ ಬುದ್ಧರನ್ನು ನೆನಪಿಸಿ ಓದುಗನಿಗೆ ಸನ್ಮಾರ್ಗ, ಸಾಧನೆಯ ಹಾದಿ ಹಿಡಿಯಲು ಪಥ ನಿರ್ಮಿಸುತ್ತದೆ ಈ ಕೃತಿ.
ಇದಲ್ಲದೆ ಮಧು ಪಾಂಡೆಯವರ ಹತ್ತು ಹಲವು ಬಿಡಿ ಲೇಖನಗಳು ವಿಶ್ವವಿದ್ಯಾನಿಲಯಗಳ ಬೇರೆ ಬೇರೆ ಸಂಗ್ರಹಗಳಲ್ಲಿ ಪ್ರಕಟಗೊಂಡು ನಾಡಿನಾದ್ಯಂತ ಪ್ರತಿಕ್ರಿಯೆಗೆ ಒಳಗಾಗಿವೆ. ಮಧು ಪಾಂಡೆಯವರು ಬರೆದದ್ದು ಬೆಟ್ಟದಷ್ಟು. ಆದರೆ ಮುದ್ರಿತವಾದ್ದು ಸಾಸಿವೆಯಷ್ಟು.
ಇಂದಿಗೂ ಮಹಿಳೆ ಮನೆಗೆ ಸೀಮಿತವಾಗಿ ಕಳೆದು ಹೋಗುವಂತ ಸಂದರ್ಭಗಳೇ ಹೆಚ್ಚು. ಇಂತಹ ಸ್ತ್ರೀಯರಿಗೆಲ್ಲಾ ಮಧುಕುಮಾರಿ ಮಾರ್ಗದರ್ಶಕಿಯಾಗಿದ್ದಾರೆ. ಇವರ ಜೀವನದ ಹತ್ತು ಹಲವು ರೂಪಗಳನ್ನು ತೆರೆದಿಡುವುದು ಮಹಿಳಾ ಜಗತ್ತಿಗೆ ಮಾದರಿಯಾಗಿದೆ.
ಕೇವಲ ಸಾಹಿತ್ಯ ಕ್ಷೇತ್ರವಲ್ಲದೆ ಸಾಮಾಜಿಕ, ಧಾರ್ಮಿಕ ಮತ್ತು ನೈತಿಕ ಕಾರ್ಯಗಳನ್ನು ಸಹ ಮೈಗೂಡಿಸಿಕೊಂಡಿದ್ದಾರೆ. ಮಾರ್ಚ್ 2013 ರಲ್ಲಿ ಇವರು ಬಸವ ಸಮಿತಿಯಿಂದ ನಡೆಸಿದ ‘ಶಿವಶರಣ ಅರಳಯ್ಯ’ ನಾಟಕದಲ್ಲಿ ಗುರುಲಿಂಗಮ್ಮನ ಹಾಸ್ಯ ಪಾತ್ರದೊಂದಿಗೆ ಅತ್ಯುತ್ತಮ ಅಭಿನಯದ ಜೊತೆಗೆ ಜನಪದ ನೃತ್ಯವನ್ನು ಮಾಡಿದ್ದನ್ನು ನೋಡಿದರೆ ನವ ಯುವತಿಯರನ್ನು ನಾಚಿಸುವಂತಿತ್ತು. ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ
ಮಹಿಳೆಯರ ಸವಾಲು, ಸಮಸ್ಯೆ, ಶೋಷಣೆ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ. ಭಾಷಣ ಹಾಗೂ ಲೇಖನಗಳು ಹತ್ತು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಶಾಲಾ ಮಕ್ಕಳಿಗಾಗಿ, ನೃತ್ಯ, ನಾಟಕ ಪರಿಸರ ಮಾಲಿನ್ಯ, ವರದಕ್ಷಿಣೆ ಸಮಸ್ಯೆ ಮುಂತಾದ ನಾಟಕ ಬರೆದು ಲೇಖಕಿ, ನಿರ್ದೇಶಕಿ, ನಿರ್ಮಾಪಕಿ ಆಗಿ ಕಾರ್ಯ ನಿರ್ವಹಿಸಿ ಮಕ್ಕಳಿಗೆ ಹಲವಾರು ಬಹುಮಾನಗಳನ್ನು ದೊರಕುವಂತೆ ಮಾಡಿದ್ದಾರೆ. ಹರಿದಾಸ ಹವ್ಯಾಸ ಕಲಾವಿದರ ಸಂಘದ ಸದಸ್ಯಳಾಗಿ ಶ್ರೀ ಜಗನ್ನಾಥದಾಸರು, ಶ್ರೀ ಪ್ರಾಣೇಶದಾಸರು, ಶ್ರೀ ವಿಜಯದಾಸರು ನಾಟಕಗಳಲ್ಲಿ ಗುಂಡಮ್ಮ, ತಾಮರಸ ಪಾತ್ರದಲ್ಲಿ ತುಂಬಾ ಹೆಸರುವಾಸಿಯಾಗಿದ್ದಾರೆ. ಈ ನಾಟಕಗಳನ್ನು ಪಂಡಾರಾಪುರ, ಪುಣೆ, ಕಾಶಿ, ಸವಣೂರು, ಧಾರವಾಡ, ಬೆಂಗಳೂರು ಮಂತ್ರಾಲಯ ಮುಂತಾದ ಕಡೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಶಿಸ್ತಿನ ಸಿಪಾಯಿಯಾದ ಇವರು ಭಾರತ ಸೈಟ್ಸ್ ಅಂಡ್ ಗೈಡ್ಸ್ ಸೇವಾದಳ ಸಂಸ್ಥೆಯಿಂದ ಮಕ್ಕಳನ್ನು ರಾಜ್ಯ ಮಟ್ಟದವರೆಗೆ ಬೆಳೆಸಿದ್ದಾರೆ. ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಬಹುಮಾನ ಗಿಟ್ಟಿಸಿ, ಸರ್ವಾಂಗೀಣ ಪ್ರಗತಿಗಾಗಿ ಹಗಲಿರಳು ಶ್ರಮಿಸಿದ್ದಾರೆ.
ಸಮಾಜ ಸೇವೆಯಲ್ಲೂ ಇವರದು ಎತ್ತಿದ ಕೈ. ಯಾವುದೇ ಸಭೆ ಸಮಾರಂಭವಾಗಲಿ ಅನ್ನದ ಸೌಟು ಹಿಡಿದು ಸಾವಿರಾರು ಜನರಿಗೆ ಊಟ ಬಡಿಸುತ್ತಾರೆ. ತಟ್ಟೆ ತೊಳೆಯುತ್ತಾರೆ. ಕಸ ಗೂಡಿಸುತ್ತಾರೆ. ಕೆಲಸದಲ್ಲಿ ಮೇಲು ಕೀಳಿಲ್ಲಾ. ಕಾಯಕವೇ ಕೈಲಾಸ ಇದು ಇವರ ತತ್ವ. ಕಳೆದ ಇಪ್ಪತ್ತು ವರ್ಷದಿಂದ ಜೈಲಿನಲ್ಲಿರುವ ಖೈದಿಗಳಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬ ಆಚರಿಸುತ್ತಾರೆ. ಸಿಹಿ ತಿನಿಸುತ್ತಾರೆ. ವನ ಮಹೋತ್ಸವಕ್ಕಾಗಿ ಮಕ್ಕಳೊಂದಿಗೆ ನೂರಾರು ಸಸಿ ನೆಡುವ ಕಾರ್ಯಕ್ರಮ ಮತ್ತು ಬಡವರಿಗೆ ಉಚಿತ ನೇತ್ರ ಚಿಕಿತ್ಸೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಭಾವೈಕ್ಯತೆ ಸಮಾರಂಭ ಸೇರಿದಂತೆ ಎಲ್ಲಾ ರಂಗಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇವರು ಜಾಗೃತ ಮಹಿಳೆಯಾಗಿ, ಉತ್ತಮ ಶಿಕ್ಷಕಿಯಾಗಿ ಆದರ್ಶ ಮಹಿಳೆಯಾಗಿ, ಲೇಖಕಿಯಾಗಿ, ಕವಯತ್ರಿಯಾಗಿ, ಸಾಹಿತಿಯಾಗಿ ಸದಾ ಉತ್ಸಾಹದ ಬುಗ್ಗೆಯಂತೆ ಚಿಮ್ಮುತ್ತಿರುತ್ತಾರೆ. ಇಂತವರಿಗೆ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ದೊರಕಿರುವುದು ಸಾರ್ಥಕವಾಗಿದೆ.
ಮಧುಕುಮಾರಿ ಪಾಂಡೆಯವರ ಕ್ರಿಯಾಶೀಲ ಕಾರ್ಯಚಟುವಟಿಕೆಗಳ ಪಟ್ಟಿ
1) 40 ದಿನಗಳ ಪೊಪೆಟ್ರಾ ತರಬೇತಿ ದೆಹಲಿಯಲ್ಲಿ (ತೊಗಲು ಗೊಂಬೆ).
2) ಕರಕುಶಲ ತರಬೇತಿ, ಉದಯಪುರ ರಾಜಸ್ಥಾನದಲ್ಲಿ
3) ರಾಷ್ಟ್ರೀಯ ಶಾಂತಿ ಮತ್ತು ಭಾವೈಕ್ಯತೆ ಶಿಬಿರ ಬೆಂಗಳೂರು.
4) ಅಂತರಾಷ್ಟ್ರೀಯ ಮಹಿಳಾ ಕಾರ್ಯಾಗಾರ ಚೈನ್ನೈ (ಮದ್ರಾಸ್)
5) ಅಖಿಲ ಭಾರತ ಶಿಕ್ಷಕರ ಸಮಾರಂಭ ಶಿಮ್ಲಾ, ಅಮೃತಸರ, ಜಲಿಯನ್ ವಾಲಾಬಾಗ್, ಸ್ವರ್ಣ ಮಂದಿರ, ವಾಘಾ ಬಾರ್ಡರ್
6) ನಾಗರೀಕ ಬಂದೂಕು ತರಬೇತಿ
7) ಯೋಗ ತರಬೇತಿ
8) ಕುಟುಂಬ ಕಲ್ಯಾಣ, ಏಡ್ಸ್ ಶಿಬಿರ, ಉಳಿತಾಯ ಖಾತೆ, ಸಂತ್ರಸ್ತರಿಗೆ ಹಣ ಸಂಗ್ರಹ,
ಬೀದಿ ನಾಟಕಗಳು,
9) ಸ್ಕೌಟ್ ಮತ್ತು ಗೈಡ್ ರಾಲಿಗಳು, ಅಂತರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ (ಭೂಪಾಲ್, ಮಧ್ಯಪ್ರದೇಶ)
10) ಮಹಿಳಾ ವಿಭಾಗದ ರಾಜ್ಯ ಮಟ್ಟದ ಮಹಿಳಾ ಕಾರ್ಯಾಗಾರ, ಬೆಂಗಳೂರು
11) ಪರಿಪೂರ್ಣ ಮಹಿಳೆ ಕಾರ್ಯಕ್ರಮ ಉದಯ ಟಿವಿ
12) ಚೈತ್ರಾ ಚಿಗುರು, ಉಚಿತ ಬೇಸಿಗೆ ಶಿಬಿರ
13) ಉಚಿತ ಕಾನೂನು ಅರಿವು-ನೆರವು ಶಿಬಿರ
14) ಕರ್ನಾಟಕ ರಾಜ್ಯ ನೌಕರರ ಸಂಘ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಯಾಗಿ
ಕಾರ್ಯನಿರ್ವಹಣೆ
15) ಅಖಿಲ ಭಾರತ ಕವಿ ಸಮ್ಮೇಳನದಲ್ಲಿ ಬಹುಭಾಷಾ ಕವಿಗೋಷ್ಠಿಯಲ್ಲಿ ಕಾವ್ಯ ವಾಚನ ಮಾಡಿ
(ನಾಗಪುರ, ಹೈದ್ರಾಬಾದ್, ಕೊಲ್ಲಾಪುರ) ಅತ್ಯುತ್ತಮ ಕವಿಯತ್ರಿಯಾಗಿ ಹೊರ ಹೊಮ್ಮಿದ್ದಾರೆ.
ಪ್ರಶಸ್ತಿ ಮತ್ತು ಸನ್ಮಾನಗಳು
1) ತಾಲೂಕಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
2) ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ
3) ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
4) ಪರಿಸರ ಪ್ರಶಸ್ತಿ
5) ಕನ್ನಡ ರಾಜ್ಯೋತ್ಸವ ಪ್ರಶಸ್ತಿ (ತಾಲೂಕು ಮತ್ತು ಜಿಲ್ಲೆ)
6) ಇಂಡಿಯನ್ ಬೊಲ್ಟ್ ಪ್ರಶಸ್ತಿ ಬೆಂಗಳೂರು
7) ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ (ಧಾರವಾಡ)
8) ಸಾವಿತ್ರಿಬಾಯಿ ಫುಲೆ ವೀರಾಂಗನಾ ಪ್ರಶಸ್ತಿ ದೆಹಲಿ
9) ಟಿಪ್ಪು ಸುಲ್ತಾನ್ ಆದರ್ಶ ಶಿಕ್ಷಕಿ ಪ್ರಶಸ್ತಿ
10) ಕಲ್ಮಠ ಶ್ರೀಗಳಿಂದ ಸಮಾಜ ಶಿಕ್ಷಕಿ ಪ್ರಶಸ್ತಿ 11) ಸಮಾಜ ಸೇವಾ ಲೈಯನ್ಸ್ ಕ್ಲಬ್ ಪ್ರಶಸ್ತಿ
12) ಚುಟುಕು ಶ್ರೀ ಪ್ರಶಸ್ತಿ
13) ಚೈತನ್ಯ ಯುವಕ ಸಂಘದಿಂದ ಪ್ರಶಸ್ತಿ
14) ಯುವ ಜನ ಮೇಳ, ಕ್ರೀಡಾ ಇಲಾಖೆ ಜಿಲ್ಲಾಡಳಿತ ವತಿಯಿಂದ ಆಟೋಟಗಳ ಪ್ರಶಸ್ತಿ (40 ವರ್ಷ ಮೇಲ್ಪಟ್ಟವರು)
15) ಸಾಕ್ಷರತಾ ಪ್ರಶಸ್ತಿ
16) ಜಿಲ್ಲಾಮಟ್ಟದ ಸಹ ಪಠ್ಯ ಚಟುವಟಿಕೆಗಳ ಪ್ರಶಸ್ತಿ
17) ನಗರಸಭೆ ರಾಯಚೂರು ನಾಡಹಬ್ಬ ಪ್ರಶಸ್ತಿ
18) ರಾಜ್ಯ ಮಟ್ಟದ ಪತ್ರಿಕೆಗಳ ದೀಪಾವಳಿ ವಿಶೇಷಾಂಕ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬಹುಮಾನ.