ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಜು.20: ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿಯ ಬಿಜ್ಜವಾರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಬಿಜ್ಜವಾರ ಗ್ರಾಮ ಪಂಚಾಯತಿ 12 ಸದಸ್ಯರ ಬಲ ಹೊಂದಿದ್ದು ಜೆಡಿಎಸ್ ಬೆಂಬಲಿತ 6, ಕಾಂಗ್ರೆಸ್ ಬೆಂಬಲಿತ 5, ಪಕ್ಷೇತರ 1 ಇದ್ದು, ಎರಡನೇ ಅವಧಿಗೆ ಸಾಮಾನ್ಯ ಮೀಸಲಾತಿ ಮತ್ತು ಉಪಾಧ್ಯಕ್ಷರಿಗೆ ಸಾಮಾನ್ಯ ಮಹಿಳೆ, ಅಧ್ಯಕ್ಷರಾಗಿ ಮಹಾದೇವ್ ಮತ್ತು ಉಪಾಧ್ಯಕ್ಷರಾಗಿ ಆರತಿ ರವರು ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಅಮೃತಾ ಅವರು ಘೋಷಿಸಿದರು.
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಭೀಮರಾಜ್ ಮಾತನಾಡಿ, ನಾವು ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ, ನಂತರ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಪಕ್ಷಾತೀತವಾಗಿ ಶ್ರಮಿಸಿ ಸದಸ್ಯರ ಸಹಕಾರದಿಂದ ಮಾದರಿ ಪಂಚಾಯತಿ ಮಾಡಲು ಮುಂದಾಗಬೇಕೆಂದು ನೂತನ ಅಧ್ಯಕ್ಷ ಮಹಾದೇವ್ ಅವರಿಗೆ ತಿಳಿಸಿದರು.
ಬಿಜ್ಜವಾರ ಗ್ರಾ.ಪಂ ನೂತನ ಅಧ್ಯಕ್ಷ ಮಹಾದೇವ್ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಸೌಕರ್ಯ ನೀಡುವಲ್ಲಿ ಪಕ್ಷಾತೀತವಾಗಿ ಶ್ರಮಿಸುವುದಾಗಿ ಹಾಗೂ ನಮ್ಮ ಪಂಚಾಯತಿಗೆ ಆದಾಯ ಮೂಲ ಕಡಿಮೆಯಿದ್ದರೂ ಸರ್ಕಾರ ಗುರುತಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ರಾಮಣ್ಣ, ನಾಗರಾಜು, ಪೂರ್ಣಿಮ, ಮಧುಶ್ರೀ, ರಾಮಸ್ವಾಮಿ, ಭಾಗ್ಯಮ್ಮ ಮುಂತಾದವರು ಇದ್ದರು.