ಸುದ್ದಿಮೂಲವಾರ್ತೆ
ಮುದಗಲ್ ಏ,೦೬: ದೇಶದ ಜನರಿಗೆ ಅನ್ನ ನೀಡಿ ಪ್ರಾಣ ಉಳಿಸುವ ಕೃಷಿಕ ಮತ್ತು ಗಡಿಯಲ್ಲಿ ದೇಶದ ಭದ್ರತೆಗೆ ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಸೈನಿಕ ನಮ್ಮ ದೇಶದ ಅತೀ ದೊಡ್ಡ ಆಸ್ತಿಯೆಂದು ತಿಮ್ಮಾಪೂರು ಕಲ್ಯಾಣಾಶ್ರಮದ ಪೂಜ್ಯರದ ಮಹಾಂತಸ್ವಾಮೀಜಿ ಸಾಲಿಮಠ ಹೇಳಿದರು.
ಸಮೀಪದ ಕಲ್ಯಾಣಾಶ್ರಮದಲ್ಲಿ ಜನ-ಮನ ಕಲ್ಯಾಣ ಜಾತ್ರೆಯ ರೈತ ಚಿಂತನ, ಕಲ್ಯಾಣ ಶ್ರೀ ಪ್ರಶಸ್ತಿ ಕಾರ್ಯಕ್ರಮದಲ್ಲಿ ಆಶೀರ್ವದಿಸಿ ಮಾತನಾಡಿದ ಅವರು ಕಳೆದ ೮ವರ್ಷದಿಂದ ಆಶ್ರಮವು ಇಂತಹ ಅಪರೂಪದ ಕಾರ್ಯಕ್ರಮ ನೀಡುತ್ತಾ ಬಂದಿದೆ. ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಾನೀಯರನ್ನು ಗುರುತಿಸಿ ಸತ್ಕರಿಸಿ ಗೌರವಿಸುತ್ತದೆ. ಈ ಸಲ ರೈತರನ್ನು ಮತ್ತು ದೇಶದ ಸೈನಿಕರನ್ನು ಮಠದಿಂದ ಗೌರವಿಸುತ್ತಿರುವುದು ಹೆಮ್ಮೆ ಅನಿಸುತ್ತಿದೆ ಎಂದರು.
ಪ್ರಶಸ್ತಿ ಪ್ರದಾನ- ವಿಜಯಪುರದ ಬಸವ ಕೇಂದ್ರದ ಜಿಲ್ಲಾಧ್ಯಕ್ಷ ನಾನಾಗೌಡ ಎಸ್ ಪಾಟೀಲ್ ನಾಗರಹಳ್ಳಿಗೆ ಕೃಷಿ ಕಲ್ಯಾಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಟ್ಟೂರು ಗ್ರಾಮದ ನಿವೃತ್ತ ಯೋಧ ಪಂಪಣ್ಣ ಜಾವೂರುರಿಗೆ ಸಂಸ್ಮರಣೆ ಗೌರವ ಪುರಸ್ಕಾರ. ಮಸ್ಕಿಯಲ್ಲಿ ತಮ್ಮ ಅಮೂಲ್ಯವಾದ ವೈದ್ಯಕೀಯ ಸೇವೆ ಸಲ್ಲಿಸಿದ ಡಾ|| ಶಿವಶರಣಪ್ಪ ಇತ್ಲಿಯವರಿಗೆ ಜೀವಮಾನದ ಸಾಧನೆಗಾಗಿ ಕಲ್ಯಾಣಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಯಿತು.
ಇತ್ತೀಚಿಗೆ ಮಠದ ಪೀಠವನ್ನು ಅಲಂಕರಿಸಿದ ನೂತನ ಶ್ರೀಗಳಾದ ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠ ಬಸವಲಿಂಗ ಸ್ವಾಮೀಜಿ, ನಂದವಾಡಗಿ-ಆಳAದ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಅಭಿನವ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ಅಡವಿ ಅಮರೇಶ್ವರ ತೋಂಟದಾರ್ಯ ಶ್ರೀಗಳಿಗೆ ಮಠದ ಪೂಜ್ಯರಾದ ಮಹಾಂತಸ್ವಾಮೀಜಿ ಸಾಲಿಮಠ ಗೌರವಾರ್ಪಣೆ ಸಲ್ಲಿಸಿದರು.
ಶಿಕ್ಷಕ ಸೂಗುರೇಶ ಹಿರೇಮಠ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸುತ್ತಲಿನ ಗ್ರಾಮಸ್ಥರು, ಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸದ್ದರು.