ಸುದ್ದಿಮೂಲ ವಾರ್ತೆ
ಬಾಗೇಪಲ್ಲಿ,ಅ.28: ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ವಾಲ್ಮೀಕಿ ನಾಯಕ ನೌಕರರ ಸಂಘದ ವತಿಯಿಂದ ಆಚರಿಸಲಾಯಿತು.
ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಮಹಾಕಾವ್ಯ ರಾಮಾಯಣವನ್ನು ಪ್ರಪಂಚಕ್ಕೆ ನೀಡಿದವರು. ಅಂತಹ ಮಹಾನ್ ವ್ಯಕ್ತಿಯು ಒಂದು ಕಾಲದಲ್ಲಿ ದರೋಡೆ ಮಾಡುತ್ತಿದ್ದನಂತೆ, ನಂತರ ತನ್ನ ಪಾಪದ ಪಾಲನ್ನು ಕುಟುಂಬಸ್ಥರೇ ಹಂಚಿಕೊಳ್ಳುವುದಿಲ್ಲ ಎಂದಾಗ ಮನಸ್ಸು ಪರಿವರ್ತನೆಯಾಗಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮಹಾತ್ಮನಾಗಿ ಆದಿಕವಿಯಾದವರು ಎಂದು ತಿಳಿಸಿದರು.
ನಮ್ಮಂತಹ ಬರನಾಡು, ಕೈಗಾರಿಕೆಗಳಿಲ್ಲದ, ಶಾಶ್ವತ ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಶಿಕ್ಷಣವೊಂದೇ ಉತ್ತಮ ಸಾಧನ. ಈ ಶಿಕ್ಷಣದ ಮೂಲಕ ಅಭಿವೃದ್ಧಿಯನ್ನು ಸಾಧಿಸಬಹುದು. ಹಾಗಾಗಿ ಪೋಷಕರು ತಪ್ಪದೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಎಂದು ತಿಳಿಸಿದರು.
ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಶೇ. 6 ರಷ್ಟು ವಾಲ್ಮೀಕಿ ಸಮುದಾಯವನ್ನು ಹೊಂದಿದ್ದು, ನಾವು ವಾಲ್ಮೀಕಿ ಮಹರ್ಷಿ ತತ್ವ ಸಿದ್ದಾಂತ, ಅವರ ಕೃಷಿ. ಜ್ಞಾನ ಎಲ್ಲವನ್ನು ಪ್ರತಿಯೊಬ್ಬರು ಮೈಗೂಡಿಸಕೊಳ್ಳಬೇಕು. ಮುಖ್ಯವಾಗಿ ಮಕ್ಕಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ವಿದ್ಯಾಭ್ಯಾಸ ಪಡೆಯಬೇಕು. ಸಮುದಾಯದಲ್ಲಿ ಶಿಕ್ಷಣದ ಬಗ್ಗೆ ತಾತ್ಸಾರ ಮನೋಭಾವ ಸಲ್ಲದು, ಹಾಗಾಗಿ ಸಾಧಿಸುವ ಛಲವಿದ್ದರೆ ಉತ್ತಮ ಸ್ಥಾನಮಾನಗಳನ್ನು ಗಳಿಸಬಹುದು ಎಂದರು.
ಈ ಸಂಧರ್ಭದಲ್ಲಿ ಕಳೆದ ವರ್ಷ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ವಾಲ್ಮೀಕಿ ನಾಯಕ ನೌಕರರ ಸಂಘದ ಪದಾಧಿಕಾರಿಗಳಾದ ಎಂ.ಸಿ ನಂಜುಂಡಪ್ಪ, ತಾಲೂಕು ವೈದ್ಯಧಿಕಾರಿಗಳಾದ ಡಾ. ಸತ್ಯನಾರಾಯಣ ರೆಡ್ಡಿ. ಶಿವಪ್ಪ, ನಿವೃತ್ತ ಉಪ ವಿಭಾಗಾಧಿಕಾರಿ ರಾಮಾಂಜಿನಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬೂರಗಮಡುಗು ನರಸಿಂಹಪ್ಪ ಸೇರಿದಂತೆ ಹಲವರು ಇದ್ದರು.