ಸುದ್ದಿಮೂಲ ವಾರ್ತೆ
ಹಂಫಿ,ಅ.3:ದೇಶಾದ್ಯಂತ ನಡೆದ ಸ್ವಚ್ಛತೆಯೇ ಸೇವೆ ಅಭಿಯಾನದಡಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಮಹೋನ್ನತ ಸ್ಥಾನ ಪಡೆದಿರುವ ವಿಶ್ವವಿಖ್ಯಾತ ಹಂಪಿಯಲ್ಲಿ ಮಾಜಿ ಸೈನಿಕರು ಮತ್ತು ವೀರ ನಾರಿಯರಿಂದ ಸ್ವಚ್ಛತಾ ಅಭಿಯಾನ ನಡೆಯಿತು.
ಇಬ್ಬರು ಮಹಾನ್ ರಾಷ್ಟ್ರ ನಿರ್ಮಾಪಕರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದ್ದೂರು ಶಾಸ್ತ್ರಿ ಜಯಂತಿ ಹಿನ್ನೆಲೆಯಲ್ಲಿ ವಿಜಯನಗರದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಸುಪ್ರಸಿದ್ಧ ಹಂಪಿಯ ಪ್ರಮುಖ ಸ್ಥಳಗಳಲ್ಲಿ 200 ಮೀಟರ್ ಉದ್ದದ ರಾಷ್ಟ್ರ ದ್ವಜ ಪಥ ಸಂಚಲನ ಹಮ್ಮಿಕೊಂಡಿದ್ದು, ಪಾರಂಪರಿಕ ಕಟ್ಟಡಗಳು, ಸ್ಮಾರಕಗಳನ್ನು ಉಳಿಸಬೇಕು. ಈ ಅಮೂಲ್ಯ ಸಾಂಸ್ಕೃತಿಕ ತಾಣಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಕೊಡುಗೆಯಾಗಿ ನೀಡುವಂತೆ ಮಾಜಿ ಸೈನಿಕರು, ವೀರ ನಾರಿಯರು ಅರಿವು ಮೂಡಿಸಿದರು. ವಿರುಪಾಕ್ಷ ದೇವಸ್ಥಾನ, ಬಸವಣ್ಣ, ವಿಜಯ ವಿಠ್ಠಲ ದೇವಸ್ಥಾನ ಸೇರಿ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಸೇವೆ ಹಮ್ಮಿಕೊಳ್ಳಲಾಗಿತ್ತು.
ಇದಲ್ಲದೇ ಸರ್ಕಾರಿ ಶಾಲೆಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮತ್ತು ಜೈಲಿನಲ್ಲಿ ಕೈದಿಗಳ ಮನ ಪರಿವರ್ತನೆ ಕಾರ್ಯಕ್ರಮಗಳನ್ನು ಸಹ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.
ಶಾಸಕರಾದ ಗವಿಯಪ್ಪ, ಜಿಲ್ಲಾಧಿಕಾರಿ ದಿವಾಕರ್, ಪೊಲೀಸ್ ವರಿಷ್ಟಾಧಿಕಾರಿ ಹರಿಬಾಬು ಹಾಗೂ ರಾಜ್ಯಾಧ್ಯಕ್ಷರಾದ ಶಿವಣ್ಣ. ಎನ್ ಕೆ, ಜಿಲ್ಲಾಧ್ಯಕ್ಷ ಮಂಜುನಾಥ್, ವೀರ ನಾರಿ ಘಟಕ ದ ರಜನಿ ಸುಬ್ಬಯ್ಯ ಮತ್ತಿತರರು ಸ್ವಚ್ಛತಾ ಶ್ರಮದಾನದಲ್ಲಿ ಬಾಗವಹಿಸಿದ್ದರು.