ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಅ.2: ಬ್ರಿಟೀಷ್ ಆಳ್ವಿಕೆಯಿಂದ ಭಾರತವನ್ನು ಮುಕ್ತ ಮಾಡಲು ಅಹಿಂಸಾ ಮಾರ್ಗವೇ ಸೂಕ್ತ ಎಂದು ಆ ಮಾರ್ಗದಲ್ಲಿಯೇ ಸ್ವಾತಂತ್ರ್ಯಗಳಿಸಿಕೊಳ್ಳುವಲ್ಲಿ ಯಶಸ್ವಿಯಾದವರು ರಾಷ್ಟ್ರಪಿತ, ಮಹಾತ್ಮ ಗಾಂಧೀಜಿ ಎಂದು ಉನ್ನತ ಶಿಕ್ಷಣ ಸಚಿವಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ಸೋಮವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ 154ನೇ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಅಂದಿನ ಸಮಾಜದಲ್ಲಿದ್ದ ಅಸ್ಪೃಶ್ಯತೆ ನಿವಾರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸ್ವದೇಶಿ ಚಳುವಳಿ ಕೈಗೊಂಡು ಜನರ ಬದುಕನ್ನು, ಉದ್ಯೋಗವನ್ನು, ರಾಷ್ಟ್ರ ಪ್ರೇಮವನ್ನು ಇಮ್ಮಡಿಗೊಳಿಸಲು ಶ್ರಮಿಸಿದರು. ಅವರ ಜೀವನವೇ ನಮಗೆ ಒಂದು ಪಾಠವಾಗಿ ಮಾದರಿಯಾಗಿದೆ. ಇಂತಹ ಮಹಾನ್ ವ್ಯಕ್ತಿಯ ಜೀವ ತ್ಯಾಗದಿಂದ ನಾವು ನೆಮ್ಮದಿಯುತ ಬದುಕು ಮಾಡುತ್ತಿರುವ ನಾವೆಲ್ಲ ಅವರಿಗೆ ಬೆಲೆ ಕೊಡುವುದಾದರೆ ವಿಶ್ವದಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದು, ಇದನ್ನು ಇನ್ನಷ್ಟು ಅತ್ಯುನ್ನತ ಮಟ್ಟಕ್ಕೆ ನಾವೆಲ್ಲ ತೆಗೆದುಕೊಂಡು ಹೋಗಬೇಕು, ಜೊತೆಗೆ ಅವರ ವಿಚಾರ ಧಾರೆಗಳನ್ನು ನಾವು ಅನುಸರಿಸಿ ಬಾಳಬೇಕು. ಮುಂದಿನ ಪೀಳಿಗೆಗೆ ತಿಳಿಸಿ ಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರಿಗಳು ಮೊದಲು ಕೇಂದ್ರ ಮಂತ್ರಿಗಳಾಗಿ ನಂತರ ಪ್ರಧಾನ ಮಂತ್ರಿಗಳಾದವರು, ಪ್ರಾಮಾಣಿಕತೆ, ಸರಳತೆಗೆ, ದಕ್ಷ ಕಾರ್ಯವೈಖರಿಗೆ ಹೆಸರಾದವರು. ರೈಲು ಅಪಘಾತವಾದಗ ಒಮ್ಮೆ ಮಂತ್ರಿ ಪದವಿಯನ್ನೆ ತೊರೆದಂತವರು. ರಾಜಕೀಯ ಪದವಿಯಲ್ಲಿದ್ದಾಗ ತಮ್ಮ ಕುಟುಂಬ ನಿರ್ವಹಿಸಿ ಉಳಿದ ಹಣವನ್ನು ಸರ್ಕಾರಕ್ಕೆ ಮರುಪಾವತಿಸಿದಂತಹ ಪ್ರಾಮಾಣಿಕ ರಾಜಕಾರಣಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದಕ್ಕೆ ಮಾದರಿಯಾಗಿದ್ದವರು ಶಾಸ್ರ್ತಿಗಳು ಎಂದು ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ ಪ್ರೋ.ಕೋಡಿರಂಗಪ್ಪ ಮಾತನಾಡಿ, ಮಹಾತ್ಮ ಗಾಂಧೀಜಿಯವರು ನಮಗೆ ಕೇವಲ ಸ್ವಾತಂತ್ರ್ಯವನ್ನಷ್ಟೆ ತಂದು ಕೊಡಲಿಲ್ಲ ಅಂದಿನ ಸಮಾಜದಲ್ಲಿ ಇದ್ದ ಅಸ್ಪೃಶ್ಯತೆ, ಜಾತಿಪದ್ದತಿ, ವಿದೇಶಿ ವ್ಯಾಮೋಹ, ಲಿಂಗ ಅಸಮಾನತೆಯನ್ನು ತೊಡೆದು ಹಾಕುವಂತಹ ಆಂದೋಲನಗಳನ್ನು ಮಾಡಿ ಎಲ್ಲರೂ ಒಳಗೊಳ್ಳುವಂತಹ ಸಮಾಜವನ್ನು ನಮಗೆ ಬಿಟ್ಟು ಹೋಗಿದ್ದಾರೆ. ಗ್ರಾಮಸ್ವರಾಜ್ಯ ಕಲ್ಪನೆಯನ್ನು ಅಂದೆ ಕಂಡಿದ್ದರು. ವಿಶ್ವದ ಅಹಿಂಸಾವಾದದ ಪ್ರತಿಪಾದಕರಾಗಿ ಎಲ್ಲಾರ ಮನಸ್ಸನ್ನು ಗೆದ್ದಿದ್ದಾರೆ. ಆದ್ದರಿಂದ ಅವರ ಹೆಸರಿನಲ್ಲಿ ಅ.2 ನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಲಿಂಗಯ್ಯ ಶಾರದಾ ಮಠದ್ ಅವರಿಂದ ಮೂಡಿಬಂದ ಗಾಂಧೀಜಿಯವರ ಇಷ್ಟವಾದ ರಘುಪತಿ ರಾಘವ ರಾಜಾರಾಂ ಹಾಗೂ ವೈಷ್ಣವ ಜನತೋ ಗೀತೆಗಳ ಗಾಯನ ಗಣ್ಯರು ಹಾಗೂ ಸಾರ್ವಜನಿಕರ ಮನಸೂರೆಗೊಳಿಸಿತು.
ಚಿಕ್ಕಬಳ್ಳಾಪುರದ ಗೀತ ಸತ್ಸಂಘ ಸಮಿತಿಯ ವಿಮಲ ಮಂಜುನಾಥ್, ಜಿಲ್ಲೆಯ ಖಾಜಿಸಾಹೇಬ್ ಆದ ಮುಪ್ತಿ ಮಸೂರ್ ಅಹಮದ್, ಚಿಕ್ಕಬಳ್ಳಾಪುರ ಚರ್ಚ್ ನ ಫಾದರ್ ಅಲೆಬೆನ್ ಜೀಮ್ ರವರು ಸರ್ವಧರ್ಮಗಳ ಪ್ರಾರ್ಥನೆಯನ್ನು ಸಲ್ಲಿಸಿ, ಲೋಕಕಲ್ಯಾಣ ಬಯಸುವ ಮೂಲಕ ಗಾಂಧೀಜಿಯವರ ಸ್ಮರಣೆ ಮಾಡಿದರು.
ನಗರದ ಪ್ರಶಾಂತಿ ಬಾಲಮಂದಿರದ ವಿದ್ಯಾರ್ಥಿಗಳು ಭಗವತ್ ಗೀತೆ ಶ್ಲೋಕಗಳನ್ನು ಪಠಿಸಿದರು. ಕಾರ್ಯಕ್ರಮ ಸರಳ, ಸುಂದರ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವಿಸಿದರು.
ಗಾಂಧೀ ಜಯಂತಿ ಪ್ರಯುಕ್ತ ಜಿಲ್ಲೆಯಾದ್ಯಂತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಾವ್ಯ.ಜಿ, ಮೋಹನ್ ಬಾಬು.ಎಸ್, ಕುಮಾರಸ್ವಾಮಿ .ಹೆಚ್, ನವ್ಯಶ್ರೀ.ಜಿ, ಚಂದ್ರಿಕಾ.ಕೆ, ನವ್ಯ.ಆರ್, ಜಲಧಿತ .ವಿ, ಶ್ರೀಲೇಖ .ಎ.ಎಂ, ಖಧೀರಾ ನೂರೈನ್ ರವರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಸಚಿವರು ಸನ್ಮಾನಿಸಿದರು.