ಪರಿಸರ ಸಂರಕ್ಷಿಸಲು ಮರಗಿಡ ಬೆಳೆಸಿ: ಮಹೇಶ್
ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು.2: ಮಳೆಗಾಲದಲ್ಲಿ ವಿವಿಧ ಜಾತಿಯ ಮರ ಗಿಡಗಳ ಬೀಜಗಳನ್ನು ಅರಣ್ಯದಲ್ಲಿ ಹಾಕುವುದರಿಂದ ಯಾರ ಸಹಾಯವಿಲ್ಲದೆ ಬೆಳೆದು ಅರಣ್ಯ ಸೃಷ್ಟಿಯಾಗಲು ಕಾರಣವಾಗುತ್ತದೆ. ಪರಿಸರವನ್ನು ಸಂರಕ್ಷಿಸಿ ಮರಗಿಡಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಗಬಾಳ, ವಿಭಾಗದ ಮೇಲ್ವಿಚಾರಕ ಮಹೇಶ್ ಹೇಳಿದರು.
ಹೊಸಕೋಟೆ ತಾಲೂಕಿನ ತಾವರೆಕೆರೆ ವಲಯದ ಕೆಂಬಳಿಗಾನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಪರಿಸರ ಸಂರಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು .
ಪರಿಸರದ ಮಹತ್ವನ್ನು ಪ್ರತಿಯೊಬ್ಬರು ತಿಳಿದು ಇತರರಿಗೂ ಪರಿಸರದಿಂದಾಗುವ ಉಪಯೋಗ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಮರಗಿಡಗಳ ಮಹತ್ವ ಅರಿತುಕೊಂಡು ಅವುಗಳ ರಕ್ಷಣೆ ಮಾಡುವುದರ ಜೊತೆಗೆ ಸಸಿಗಳನ್ನು ನೆಟ್ಟು ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ವಿವಿಧ ಜಾತಿಯ ಮರ ಗಿಡಗಳ ಬೀಜಗಳನ್ನು ನಾಟಿ ಮಾಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು .
ಗ್ರಾಪಂ ಸದಸ್ಯ ನಾಗರಾಜ್ ಮಾತನಾಡಿ , ಪರಿಸರ ಸಮೃದ್ದಿಯಾಗಿದ್ದರೆ ಒಳ್ಳೆಯ ವಾತಾವರಣ ಸೃಷ್ಟಿಯಾಗುವುದು . ವಿದ್ಯಾರ್ಥಿ ಜೀವನದಲ್ಲಿ ಪರಿಸರದೆಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಗತ್ಯವಿರುವ ಕಡೆ ಸಸಿಗಳನ್ನ ನೆಟ್ಟು ಬೆಳೆಸಲು ವಿದ್ಯಾರ್ಥಿಗಳು ಸದಾ ಮುಂದಾಗಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಗಿಡ ಮರಗಳನ್ನುಬೆಳೆಸಿದರೆ ಸಮೃದ್ಧವಾದ ಅರಣ್ಯ ವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಜಾತಿ ಮರ ಗಿಡಗಳ ಬೀಜಗಳು ಹಾಗೂ ಸಸಿಗಳನ್ನು ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ನೆಟ್ಟರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ನಾಗರಾಜ್, ಸೇವಾ ಪ್ರತಿನಿಧಿಗಳಾದ ಸುಜಾತ, ಬೇಬಿ ಶ್ಯಾಮಲಾ ಮುಖ್ಯ ಶಿಕ್ಷಕಿ ವೆಂಕಟಲಕ್ಷ್ಮಮ್ಮ, ಶಿಕ್ಷಕಿಯರಾದ ಹೇಮ , ಸುನಂದ, ಶಶಿಕಲಾ , ಜಯಮಾಲ , ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು .