ಸುದ್ದಿಮೂಲವಾರ್ತೆ ಮಾನ್ವಿ ಫೆ-19
ನನ್ನ ಶಾಸಕತ್ವದ ಅವಧಿಯಲ್ಲಿ ಮೂರು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದು, ಅದರಲ್ಲಿ ಇಂದು ನಡೆಯುತ್ತಿರುವ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ನನ್ನ ಅದೃಷ್ಟ ಮತ್ತು ಮಹಿಳೆಯರ ಅದೃಷ್ಟ ಎಂದು ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ರವಿವಾರ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಮಾನ್ವಿ ತಾಲೂಕಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಿಳಾ ಸಮ್ಮೇಳನ ನಡೆಸುವುದರಿಂದ ಮಹಿಳೆಯರಲ್ಲಿ ಹೆಚ್ಚು ಶಕ್ತಿ ತುಂಬಬೇಕು. ಇದರಿಂದ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಳವಾಗುತ್ತದೆ. ಮಹಿಳೆಯರನ್ನು ನಾವು ಗೌರವಿಸಿ, ಪೂಜಿಸಬೇಕು. ಮಹಿಳಾ ಸಮ್ಮೇಳನ ಮಾಡುವುದರಿಂದ ಅನೇಕ ಮಹಿಳೆಯರಿಗೆ ಅವಕಾಶ ದೊರೆಯುತ್ತದೆ. ಹೊಸ ಕವಯತ್ರಿಯರನ್ನು, ಯುವ ಲೇಖಕಿಯರನ್ನು, ಸಾಹಿತಿಗಳನ್ನು, ಚಿಂತಕರನ್ನು ಗುರುತಿಸಿದಂತಾಗುತ್ತದೆ. ಎಲೆಮರೆ ಕಾಯಿಯಂತಿರುವ ಯುವ ಕವಯತ್ರಿಯರಿಗೆ ಅವಕಾಶ ದೊರೆತಂತಾಗುತ್ತದೆ. ನಾನು ಶಾಸಕನಾಗಿ ಆರಿಸ ಬಂದ ನಂತರ 2018 ರಲ್ಲಿ ಎಂಟನೇ ಸಾಹಿತ್ಯ ಸಮ್ಮೇಳನ, 2021 ರಲ್ಲಿ ಒಂಭತ್ತನೆಯ ಸಮ್ಮೇಳನಗಳಿಗೆ ಸ್ವಾಗತ ಸಮಿತಿ ಅಧ್ಯಕ್ಷನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ. ಈಗ ಪ್ರಥಮ ಮಹಿಳಾ ಸಮ್ಮೇಳನ ನಡೆಯುತ್ತಿದ್ದು ಇದಕ್ಕೆ ಬೇಕಾದ ಅಗತ್ಯ ಸಹಾಯ-ಸಹಕಾರ, ಸೌಲಭ್ಯ ಒದಗಿಸಿರುವುದಾಗಿ ಮತ್ತು ಸಮ್ಮೇಳನ ಯಶಸ್ವಿಗೆ ಕಸಾಪ ಅಧ್ಯಕ್ಷ ರವಿಕುಮಾರ ಪಾಟೀಲ್ ಮತ್ತವರ ತಂಡ ಶ್ರಮಿಸುತ್ತಿದ್ದಾರೆ. ಮಾನ್ವಿ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಗುಂಪುಗಳ ಆರ್ಥಿಕ ಬಲವರ್ಧನೆಗೆ ಲಕ್ಷಾಂತರ ರೂ.ಸಾಲ ಮಂಜೂರು ಮಾಡಿಸಲಾಗಿದೆ. 1 ಕೋ.ರೂ.ವೆಚ್ಚದಲ್ಲಿ ಬಾಲಕಿಯರ ಕಾಲೇಜು ಕಟ್ಟಡ ಉದ್ಘಾಟಿಸಲಾಗಿದೆ. ಶಿಕ್ಷಣದಿಂದ ಮಹಿಳೆಯರ ಅಭಿವೃದ್ಧಿ ಸಾಧ್ಯ ಕಾರಣ ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕೆಂದು ಸಲಹೆ ನೀಡಿದರು. ನನ್ನ ಅವಧಿಯಲ್ಲಿ ನಾನೆಂದು ಪೊಲೀಸ್ ಠಾಣೆಯಲ್ಲಿ ರಾಜಕೀಯ ಮಾಡಿಲ್ಲ. ಯಾರ ವಿರುದ್ದವೂ ಕೇಸು ಹಾಕಿ ಎಂದು ಹೇಳಿಲ್ಲ. ಬೇಡ ಎಂದು ಹೇಳಿಲ್ಲ. ನಮ್ಮ ತಾಲೂಕು ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಶಾಂತಿ, ಸೌಹಾರ್ದತೆ ಇದೆ. ಕೋಮು ಗಲಭೆ ನಡೆದಿಲ್ಲ. ಜಗಳ ಹಚ್ಚುವ ಕೆಲಸ ಮಾಡಿಲ್ಲ. ಮಾನ್ವಿ ತಾಲೂಕು ಮಾನವೀಯ ತವರೂರು. ಇಲ್ಲಿ ಅನೇಕ ಶರಣ ಸಂತರು ಶಾಂತಿ ಸೌಹಾರ್ದತೆ ಸಾರಿದ್ದಾರೆ. ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಶ್ರೀಮಂತ ಗೊಳಿಸಿದ್ದಾರೆ ಎಂದು ಹೇಳಿದರು.