ಮೈಸೂರು, ಅ.13: ವಾದ ವಿವಾದ ಮತ್ತು ಆನೇಕ ಗೊಂದಲಗಳ ನಡುವೆ ನಗರದ ಪುರಭವನದ ಆವರಣದಲ್ಲಿ ಶುಕ್ರವಾರ ಮಹಿಷ ದಸರಾ ಉತ್ಸವವನ್ನು ಸಡಗರ ಸಂಭ್ರಮದಿಂದಲೇ ಆಚರಿಸಲಾಯಿತು. ಆರಂಭದಲ್ಲಿ ಮಹಿಷ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಲಾಯಿತು.
ನಿಷೇಧಾಜ್ಞೆ ನಡುವೆಯೂ ಬೈಕ್ ರ್ಯಾಲಿ ಜೊತೆ ಮಹಿಷ ಸ್ತಬ್ದ ಚಿತ್ರವನ್ನು ತರಲಾಯಿತು.ವೇದಿಕೆಯ ಬಳಿ ಮಹಿಷನ ಬೃಹತ್ ಭಾವಚಿತ್ರ ಮತ್ತು ಅದರ ಮುಂದೆ ಇದ್ದ ಅಂಬೇಡ್ಕರ್, ಬುದ್ಧ ಮತ್ತು ಮಹಿಷನ ಕಂಚಿನ ಮೂರ್ತಿಗಳಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಮಹಿಷನ ರೂಪ ಧರಿಸಿದ ವ್ಯಕ್ತಿ ವೇದಿಕೆ ಮೇಲೆ ಆಗಮಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಮೈಹಿಷಾಸುರ ಪೋಸ್ಟರ್ಗಳನ್ನು ಪ್ರದರ್ಶಿಸಲಾಯಿತು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಬೆಂಗಳೂರು ಜಿಲ್ಲೆಗಳಿಂದ ಬೈಕ್, ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ತಂಡೋಪ ತಂಡವಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದರೆ, ಮೈಸೂರಿನ ಅಶೋಕಪುರಂನಿಂದ ನೂರಾರು ಯುವಕರು ನೀಲಿ ಬಾವುಟ ಹಿಡಿದು ಬೈಕ್ಗಳ ಮೂಲಕ ಪುರಭವನಕ್ಕೆ ಬಂದರು.
ಪ್ರತಿಯೊಬ್ಬರು ನೀಲಿ ಬಾವುಟ, ಮಹಿಷನ ಭಾವಚಿತ್ರ ಹಿಡಿದು ಪ್ರದರ್ಶನ ಮಾಡಿ ಜಯಘೋಷಗಳನ್ನು ಕೂಗಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಖ್ಯಾತ ಗಾಯಕ ಅಮ್ಮಾ ರಾಮಚಂದ್ರ ಮತ್ತು ತಂಡದವರು ನಾಡ ನಡುವಿನಿಂದ ಬಂದ ನೋವಿನ ಕೂಗೆ, ಮಹಿಷನಿಗೆ ಕೋಟಿ ನಮನ, ಕರುಳಿನ ಕಥನ ಕೇಳುವ ನಾಯಕ ಎಲ್ಲಿಗೆ ಹೋದೆ, ಓ ಭೀಮರಾಯ ಇದೊ ನಿನಗೆ ವಂದನೆ ಎಂಬ ಭೀಮ ಮತ್ತು ಕ್ರಾಂತಿ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ, ಪ್ರೊ.ಕೆ.ಎಸ್ ಭಗವಾನ್, ಪ್ರೊ.ಮಹೇಶ್ ಚಂದ್ರಗುರು, ಮಹಿಷ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.
ಮಹಿಷ ದಸರಾ ಆಚರಣೆ, ಚಾಮುಂಡಿ ಚಲೋ ವಿವಾದದ ಹಿನ್ನೆಲೆಯಲ್ಲಿ ಪೊಲೀಸರು ಪುರಭವನದ ಒಳಗೆ ಮಾತ್ರ ಮಹಿಷ ದಸರಾ ಉತ್ಸವಕ್ಕೆ ಅನುಮತಿ ನೀಡಿದ್ದರು. ಮಹಿಷ ಆಯೋಜಕರಿಂದ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ನಿರಾಕರಿಸಲಾಗಿತ್ತು. ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರು ನಗರದಾದ್ಯಂತ 144ನೇ ಸೆಕ್ಷನ್ ಜಾರಿ ಮಾಡಿ ನಿಷೇಧ ಹೇರಲಾಗಿತ್ತು.