ಸುದ್ದಿಮೂಲ ವಾರ್ತೆ
ಮೈಸೂರು, ಜು.11 : ಮಹಿಷಾ ದಸರಾ ಆಚರಿಸುವುದು, ನಾಡ ಹಬ್ಬ ದಸರಾ ವಿರೋಧಿಸುವುದಕ್ಕಲ್ಲ. ಮಹಿಷಾ ಮತ್ತು ಚಾಮುಂಡಿ ಭೌಗೋಳಿಕವಾಗಿ ಎಲ್ಲೂ ಒಂದು ಕಡೆ ಹುಟ್ಟಿ ಬೆಳೆದವರಲ್ಲ. ಅಸುರರು ಎಂದರೆ ರಾಕ್ಷಸರಲ್ಲ. ಅವರು ರಕ್ಷಕರು ಎಂದು ವಿಚಾರವಾದಿ ಪ್ರೊ ಮಹೇಶ್ ಚಂದ್ರಗುರು ಪ್ರತಿಪಾದಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಷಾ ನಮ್ಮ ಚಾರಿತ್ರಿಕ ಪುರುಷ ಈ ನೆಲದ ಮಹಾ ಪುರುಷನ ಆಚರಣೆ ಮಾಡೋದು ನಮ್ಮ ಧಾರ್ಮಿಕ ಕರ್ತವ್ಯ . ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದೆ. ಕಳೆದ 5 ವರ್ಷ ನಮಗೆ ಆಚರಣೆ ಮಾಡಲು ಅವಕಾಶ ಮಾಡಿಕೊಡಲಿಲ್ಲ ಎಂದು ಹೇಳಿದರು.
ಮಹಿಷಾ ದಸರಾವನ್ನುನಿರಂತರವಾಗಿ ಮಾಡಿಕೊಂಡು ಬಂದಿದ್ದೇವೆ. ಇತಿಹಾಸ ಮತ್ತು ಪರಂಪರೆಯನ್ನ ಮರೆಯಬಾರದು. ಚಾಮುಂಡಿ ತಾಯಿ ಪುರಾಣ ಪ್ರಸಿದ್ದರಾದವರು .ಆದರೆ ಮಹಿಷಾ ಇತಿಹಾಸ ಪುರುಷ. ಪುರಾಣ ಕಟ್ಟಕತೆಗಳು, ಇತಿಹಾಸ ಸತ್ಯದ ಕತೆ ಎಂದರು.
ಸುಳ್ಳು ಮತ್ತು ಸತ್ಯದ ನಡುವೆ ನಡೆಯುವ ಸಂಘರ್ಷ ಇದು. ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸದೇ ಮತ್ಯಾರು ತಿಳಿಸಬೇಕು. ಯಾರ ದಸರಾವನ್ನಾದರೂ ಮಾಡಿಕೊಳ್ಳಲಿ. ಅಡ್ಡಿ ಇಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಸರಾ ಆರಂಭವಾಯಿತು. ನಾಲ್ವಡಿ ಅವರ ಕಾಲದಲ್ಲಿ ಇನ್ನೂ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಚಾಮುಂಡಿ ಮತ್ತು ಮಹಿಷಾ ಒಂದು ಕಾಲಘಟ್ಟದವರಲ್ಲ ಎಂದು ಹೇಳಿದರು.