ಬೆಂಗಳೂರು.ಜು,22; ಅರೋಗ್ಯ ರಕ್ಷಣಾ ನಿರ್ವಹಣೆಯ ಶೈಕ್ಷಣಿಕ ವಲದಯಲ್ಲಿ ಪ್ರಮುಖ ಸಂಸ್ಥೆಯಾಗಿರುವ ಭಾರತೀಯ ಆರೋಗ್ಯ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ – ಐಐಎಚ್ಎಂಆರ್ ನ 12 ನೇ ಬ್ಯಾಚ್ ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್ ಘಟಿಕೋತ್ಸವ ಆಚರಿಸಲಾಯಿತು. ಕೋವಿಡ್ ನಂತರದ ಎರಡು ವರ್ಷಗಳ ಕಠಿಣ ಶೈಕ್ಷಣಿಕ ತರಬೇತಿಯನ್ನು ಪೂರ್ಣಗೊಳಿಸಿದ ಪದವೀಧರರು ಭರವಸೆಯ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು.
ಘಟಿಕೋತ್ಸವದಲ್ಲಿ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ಸಂಪನ್ಮೂಲ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಮೇಜರ್ ಜನರಲ್ (ಪ್ರೊ) ಅತುಲ್ ಕೊತ್ವಾಲ್ ಮಾತನಾಡಿ, ಆರೋಗ್ಯ ವಲಯದಲ್ಲಿ ವಿಪುಲ ಅವಕಾಶಗಳಿದ್ದು, ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆಗಳಾಗುತ್ತಿವೆ. ಈ ಉದಾತ್ತ ವೈದ್ಯಕೀಯ ವೃತ್ತಿಯಲ್ಲಿ ನೈಪುಣ್ಯತೆ ಗಳಿಸಿ ಉನ್ನತ ಸ್ಥಾನ ಪಡೆಯುವ ಜೊತೆಗೆ ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಜ್ಯ ನಿರ್ದೇಶಕ ಡಾ. ನವೀನ್ ಭಟ್ ಮಾತನಾಡಿ, ಕೋವಿಡ್ ನಂತರದ ಆರೋಗ್ಯ ಸ್ಥಿತಿಗತಿಯಲ್ಲಿ ವ್ಯಾಪಕ ಬದಲಾವಣೆಯಾಗಿದ್ದು, ಯಾವುದೇ ರೀತಿಯ ತುರ್ತು ಆರೋಗ್ಯ ಸ್ಥಿತಿಗತಿಗಳನ್ನು ಎದುರಿಸುವ ಸಾಮರ್ಥ್ಯ ವೃದ್ಧಿಯಾಗಿದೆ. ಆರೋಗ್ಯ ಸೇವೆಯ ಶ್ರೇಷ್ಠತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ವೈದ್ಯಕೀಯ ಸಂಸ್ಥೆಗಳು ಮತ್ತು ಸರ್ಕಾರದ ನಡುವೆ ಬಲವಾದ ಪಾಲುದಾರಿಕೆ ಅಗತ್ಯವಾಗಿದೆ ಎಂದರು.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಐಐಎಚ್ಎಂಆರ್ ನ ಕಾರ್ಯದರ್ಶಿ ಡಾ.ಎಸ್.ಡಿ. ಗುಪ್ತಾ, ದೂರದೃಷ್ಟಿಯ ನಾಯಕತ್ವ, ನುರಿತ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ಆರೋಗ್ಯ ವೃತ್ತಿಪರರನ್ನು ತಯಾರು ಮಾಡುವಲ್ಲಿ ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಐಐಎಚ್ಎಂಆರ್ ನ ಬೆಂಗಳೂರು ವಿಭಾಗದ ಸಲಹೆಗಾರರ ಡಾ. ಸಿ.ಎಸ್. ಕೇದಾರ್, ಐಐಐಟಿ ಮಾಜಿ ನಿರ್ದೇಶಕ ಪ್ರೊ. ಎಸ್. ಸಡಗೋಪನ್, ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾದ ಡಾ. ಉಷಾ ಮಂಜುನಾಥ್,. ತುಮಕೂರಿನ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.