ಸುದ್ದಿಮೂಲ ವಾರ್ತೆ
ಕೊಪ್ಪಳ ಸೆ 16: ನಮ್ಮ ಓಣ್ಯಾಗ ಸ್ವಚ್ಛತೆ ಮಾಡಿರಿ, ಈಗ ಅಲ್ಲಿಯ ಜನ ಬಾಯಿಯಿಂದ ಕೆರವು ತೆಗೆದುಕೊಂಡು ಹೊಡಿತೀನಿ ಅಂತಾರಾ. ನಿಮ್ಮ ಕೈಮುಗಿದು ಕೇಳಿಕೊಳ್ಳುತ್ತೀನಿ. ಊರನ್ನು ಸ್ವಚ್ಛವಾಗಿಡಿರಿ ಎಂದು ಕೊಪ್ಪಳ ನಗರಸಭೆಯ ಒಂದನೆಯಾ ವಾರ್ಡಿನ ಸದಸ್ಯೆ ಜಹೀರಾ ಬೇಗಂ ಆಕ್ರೋಶ ಭರಿತವಾಗಿ ಹೇಳಿದರು.
ಇಂದು ಕೊಪ್ಪಳ ನಗರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷೆ ಶ್ರೀಮತಿ ಶಿವಗಂಗಾ ಭೂಮಕ್ಕನವರ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಪ್ಪಳ ಇಡೀ ಊರು ಸ್ವಚ್ಛತೆ ಇಲ್ಲ. ಊರಾಗ ಸ್ವಚ್ಛತೆ ಇಲ್ಲದೆ ಸೊಳ್ಳೆಗಳು ಹೆಚ್ಚಾಗಿವೆ. ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಹೆಸರಿಗಷ್ಟೆ ಸ್ವಚ್ಛತೆ ಎಂದು ಹೇಳಿತಿರಿ ಆದರೆ ಎಲ್ಲಿಯೂ ಸ್ವಚ್ಛವಾಗಿಲ್ಲ ಎಂದು ಜಹಿರಾ ಬೇಗಂರೊAದಿಗೆ ಅಮ್ಜದ್ ಪಟೇಲ್ ಸಹ ಧ್ವನಿಗೂಡಿಸಿದರು. ಇದೇ ಸಮಯದಲ್ಲಿ ಹಲವು ಸದಸ್ಯರು ಐದು ವರ್ಷವಾಯಿತು. ಊರಾಗ ಏನು ಕೆಲಸವಾಗುತ್ತಿಲ್ಲ. ನಗರಸಭೆ ಸದಸ್ಯರಿಗೆ ಕಿಮ್ಮತ್ತಿಲ್ಲದಂಗಾಗೈತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಸದಸ್ಯ ಎಂದು ಹೇಳಿಕೊಳ್ಳೋದಕ್ಕೆ ನಾಚಿಕೆಯಾಗುತ್ತಿದೆ. ಅತ್ಯಂತ ವರ್ಸ್ಟ ನಗರಸಭೆ ಎಂದು ಬಹುತೇಕ ಸದಸ್ಯರು ಆಕ್ರೋಶ ವ್ಯಕ್ತಪಸಿದರು.
ಕೊಪ್ಪಳ ನಗರದಲ್ಲಿ ಈ ಹಿಂದೆ ಆಕಳು ತಿವಿದು ಒಬ್ಬ ಮಹಿಳೆ ಸಾವನ್ನಪ್ಪಿದ್ದಾಳೆ. ನಗರದಲ್ಲಿ ಅದೇ ಆಕಳು ಈಗ ಬಿಡಾಡಿ ದನಗಳಾಗಿ ತಿರುಗಾಡುತ್ತಿವೆ. ನಾಯಿಗಳು ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಒಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದಿರಿ ಆದರೆ ಏನು ಪ್ರಯೋಜನವಾಗಿಲ್ಲ ಎಂದು ಮುತ್ತು ಕುಷ್ಟಗಿ ಹಾಗು ಗುರುರಾಜ ಹಲಗೇರಿ ಹೇಳಿದರು. ಗಣೇಶ ಹಬ್ಬದ ನಂತರ ಬಿಡಾಡಿ ದನಗಳು ಹಾಗು ನಾಯಿಗಳ ನಿಯಂತ್ರಣಕ್ಕೆ ಕ್ರಮ ವಹಿಸುವುದಾಗಿ ನಗರಸಭೆಯ ಪೌರಾಯುಕ್ತರು ಹೇಳಿದರು.
ಈ ಮಧ್ಯೆ ತೀವ್ರ ವಿವಾದ ಹುಟ್ಟಿಸಿದ್ದ ನಗರಸಭೆ ನವೀಕರಣಕ್ಕೆ ಈಗ ಅವಶ್ಯವಿದ್ದಷ್ಟು ಮಾತ್ರ ಕೆಲಸ ಆರಂಭಿಸಬೇಕು. ಇಡೀ ನಗರಸಭೆಯಲ್ಲಿ ೪೮ ಲಕ್ಷ ರೂಪಾಯಿಯಲ್ಲಿ ನಿರ್ಮಿಸಿದೆ. ಆದರೆ ನವೀಕರಣಕ್ಕೆ ೨.೫೦ ಬಳಸುತ್ತಿರುವುದು ಸರಿ ಅಲ್ಲ ಎಂದ ಸದಸ್ಯರ ವಾದಕ್ಕೆ ಈಗ ಅವಶ್ಯವಿರುವಷ್ಟು ಕೇವಲ ೫೦ ಲಕ್ಷ ರೂಪಾಯಿಯಲ್ಲಿ ನವೀಕರಣ ಮಾಡಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ನಿರಂತರ ದಾಳಿ ಮಾಡಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಲ್ಲಸಬೇಕೆಂದು ನಗರಸಭೆಯ ಸದಸ್ಯೆ ವಿದ್ಯಾ ಹೆಬಸೂರು ಹೇಳಿದರು. ಇದೇ ವೇಳೆ ಇಲ್ಲಿ ಎಲೆಕ್ಟಿçಕ್ ವಿಭಾಗದ ಜ್ಯೂನಿಯರ್ ಇಂಜನೀಯರ್ ರಾಜಕಾರಣ ಮಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಚನ್ನಪ್ಪ ಕೋಟ್ಯಾಳ ಆರೋಪಿಸಿದರು. ನಾನು ರಾಜಕಾರಣ ಮಾಡುತ್ತಿಲ್ಲ. ಕಚೇರಿ ಕೆಲಸ ಮುಗಿದ ನಂತರ ನನ್ನ ಕಾರ್ಯವನ್ನು ಪ್ರಶ್ನಿಸುವಂತಿಲ್ಲ ಎಂದು ಜೆಇ ಸೋಮಣ್ಣ ಸದಸ್ಯರಿಗೆ ಉತ್ತರಿಸಿದರು.
ನಗರದಲ್ಲಿ ನಗರಸಭೆಯ ಅನುದಾನದಲ್ಲಿ ಲೂಟಿ ಹೊಡೆಯಲಾಗಿದೆ. ದಿನಗೂಲಿಗಳ ಲೆಕ್ಕದಲ್ಲಿ ಸರಿ ಇಲ್ಲ. ಇಲ್ಲಿ ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರೆ ಎಂದು ನಗರಸಭೆ ಸದಸ್ಯರಾದ ಸಿದ್ದು ಮ್ಯಾಗೇರಿ ಹಾಗು ಪರಸುರಾಮ ಮ್ಯಾದರ ಆರೋಪಿಸಿದರು. ಈಗಾಗಲೇ ೨೦ ಲಕ್ಷ ರೂಪಾಯಿ ಹಣ ಪಾವತಿಸಿದೆ. ಇನ್ನೂ ೨೦ ಲಕ್ಷ ರೂಪಾಯಿ ನೀಡಬೇಕಾಗಿದೆ. ಈ ಬಗ್ಗೆ ಸದಸ್ಯರ ಒಪ್ಪಿಗೆ ಇಲ್ಲದೆ ಉಳಿದ ಹಣ ನೀಡುವಂತಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಆಯಿಷಾ ರುಬಿನಾ, ಪೌರಾಯುಕ್ತ ಗಣಪತಿ ಪಾಟೀಲ. ಸ್ಥಾಯಿ ಸಮಿತಿ ಅಧ್ಯಕ್ಷೆ ಯಲ್ಲಮ್ಮ ಇದ್ದರು.