ಸುದ್ದಿಮೂಲ ವಾರ್ತೆ
ಮೈಸೂರು,ಸೆ.26:ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ರೈತ ಸಂಘ ಹಾಗೂ ನಾನಾ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಟಿ.ನರಸೀಪುರ, ಮಳವಳ್ಳಿ, ಕೆ.ಆರ್.ಪೇಟೆ ತಾಲೂಕುಗಳ ಬಂದ್ ಯಶಸ್ವಿಯಾಗಿದೆ.
ಮೂರು ತಾಲೂಕುಗಳಲ್ಲಿಯೂ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಂಗಳೂರು ಬಂದ್ ಗೆ ಬೆಂಬಲ ಸೂಚಿಸಲು ಕರೆ ನೀಡಿದ್ದ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ಥಗಿತಗೊಂಡಿದ್ದವು. ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಬೆಂಬಲ ನೀಡಿದ್ದಾರೆ. ಖಾಸಗಿ ಬಸ್ ಗಳ ಸಂಚಾರವೂ ವಿರಳವಾಗಿತ್ತು.
ಪ್ರಮುಖ ಬೀದಿಗಳಲ್ಲಿ ಜನರ ಓಡಾಟ ತೀರಾ ಕಡಿಮೆ ಕಂಡುಬಂತು. ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಆಗಿಲ್ಲ. ಆದರೂ, ಮಕ್ಕಳ ಸಂಖ್ಯೆ ವಿರಳವಾಗಿತ್ತು. ವಿದ್ಯೋದಯ ವೃತ್ತದಿಂದ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಮುನ್ನೆಚ್ಚೆರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಚಾಮರಾಜನಗರದಲ್ಲಿ ಕರ್ನಾಟಕ ಕಾವಲುಪಡೆ ವತಿಯಿಂದ ಕಾವೇರಿ ಕಿಚ್ಚು ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ರಾಜ್ಯ ಸಾರಿಗೆ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆದು ಕೇಂದ್ರ ಸರ್ಕಾರ, ಕಾವೇರಿ ಪ್ರಾಧಿಕಾರ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೋರಾಟದ ನೇತೃತ್ವ ವಹಿಸಿದ ಕಾವಲು ಪಡೆಯ ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಮಾತನಾಡಿ, ಕಾವೇರಿ ಪ್ರಾಧಿಕಾರ ಹಾಗೂ ರಾಜ್ಯ ಸಂಸದರು ಧ್ವನಿ ಎತ್ತದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.