ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.9: ಮಲ್ಲೇಶ್ವರ ಕ್ಷೇತ್ರದಲ್ಲಿ ಸಮರ್ಪಕ ನೀರು ಪೂರೈಕೆ ನಿರ್ವಹಣೆ, ಶಿಕ್ಷಣ ಲಭ್ಯತೆ, ಆರೋಗ್ಯ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇಲೆ ಕಲ್ಪಿಸಲಾಗಿದೆ ಎಂದು ಸಚಿವರೂ ಆದ ಶಾಸಕ ಡಾ. ಸಿ ಎನ್ ಅಶ್ವತ್ಥನಾರಾಯಣ ಭಾನುವಾರ ಹೇಳಿದರು.
ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಯಶವಂತಪುರ ಸರ್ಕಲ್ ಹತ್ತಿರವಿರುವ ಎಂಬೆಸ್ಸಿ ಹೆರಿಟೇಜ್, ಸಲಾರ್ ಪುರಿಯ ಹಾಗೂ ಮತ್ತಿತರ ಅಪಾರ್ಟ್ಮೆಂಟ್ಗಳ ನಿವಾಸಿಗಳ ಜೊತೆ ಸಂವಾದ ನಡೆಸಿ ಮತ ಕೋರಿ ಅವರು ಮಾತನಾಡಿದರು.
ಮಲ್ಲೇಶ್ವರ ವ್ಯಾಪ್ತಿಯಲ್ಲಿ ಅಂಗನವಾಡಿ ಇಂದ ಹಿಡಿದು ಪದವಿಯವರೆಗೆ ಸರ್ಕಾರಿ ವ್ಯವಸ್ಥೆಯಲ್ಲಿ ಸುಮಾರು 10,000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬಡತನವು ಕಲಿಕೆಯ ಅವಕಾಶಗಳಿಗೆ ಅಡ್ಡಿಯಾಗದೆ ಎಲ್ಲರಿಗೂ ಸಮಾನ ಶಿಕ್ಷಣ ಲಭ್ಯವಾಗಬೇಕು ಎಂಬ ಆಶಯದೊಂದಿಗೆ ಇಲ್ಲಿನ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ನಾರಾಯಣ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸೋರಿಕೆಯನ್ನು ಶೇಕಡ 45 ರಿಂದ ಶೇಕಡ 14. 72ಕ್ಕೆ ಇಳಿಸಿರುವುದರಿಂದ ಈಗ ಮಹಡಿ ಮನೆಗಳಿಗೂ ನೀರು ಸರಾಗವಾಗಿ ಪೂರೈಕೆ ಆಗುತ್ತಿದೆ. ಇದೇ ವೇಳೆ, ಸಮರ್ಪಕ ನೀರು ನಿರ್ವಹಣೆ ಬಗ್ಗೆ ಜನಜಾಗೃತಿ ಮೂಡಿಸಲು ಮಲ್ಲೇಶ್ವರ 18ನೇ ಕ್ರಾಸ್ ನಲ್ಲಿ ವಾಟರ್ ಮ್ಯೂಸಿಯಂ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಕ್ಷೇತ್ರದಲ್ಲಿ ಆರು ಕಡೆ ನಗರ ಸಮಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಡಿಜಿಟಲ್ ಹೆಲ್ತ್ ಕ್ಲಿನಿಕ್ ಗಳಾಗಿ ಮೇಲ್ದರ್ಜೆಗೇರಿವೆ. ಇದರ ಜೊತೆಗೆ, ಆರು ಕಡೆ ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ ಗಳು ಮತ್ತು ‘ನಮ್ಮ ಕ್ಲಿನಿಕ್’ ಗಳು ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿವೆ ಎಂದರು.
ಸುಸ್ಥಿರ ನಗರ ಬೆಳವಣಿಗೆಗೆ ಸರ್ಕಾರ ಒತ್ತು ನೀಡಿದೆ. ಅದಕ್ಕೆ ಅನುಗುಣವಾಗಿ ಅಪಾರ್ಟ್ಮೆಂಟ್ ಗಳ ನಿವಾಸಿಗಳ ಹಿತರಕ್ಷಣೆಗೂ ಗಮನವಹಿಸಿದೆ. ಅವರಿಗೆ ನೀರಿನ ಬಿಲ್ ವಿದ್ಯುತ್ ಬಿಲ್ ಸೇರಿದಂತೆ ಯಾವುದೇ ನಾಗರಿಕ ಸೇವಾ ಶುಲ್ಕಗಳಲ್ಲಿ ತಾರತಮ್ಯವಾಗದಂತೆ ಕ್ರಮವಹಿಸಿದೆ. ಹಾಗೆಯೇ, ಸಮರ್ಪಕ ತ್ಯಾಜ್ಯ ನಿರ್ವಹಣೆಯಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ನೀತಿಗಳನ್ನು ರೂಪಿಸಲಾಗುತ್ತಿದೆ ಎಂದರು.
ಬ್ರಿಗೇಡ್ ರಿಜೆನ್ಸಿ, ಪಾಂಡುರಂಗ ಆಶ್ರಮ, ಶಶಿಕಿರಣ್ ಅಪಾರ್ಟ್ಮೆಂಟ್ಸ್ ಚಿತ್ರಕೂಟ, ಜುವೆಲ್, ಶೃಂಗಾರ್, ವಿಶಾಲ್ ಅಪಾರ್ಟ್ಮೆಂಟ್ ಗಳು ಹಾಗೂ, ಅರಣ್ಯ & ಜಲಮಂಡಳಿ ವಸತಿ ಸಮಚ್ಚಯಗಳಿಗೆ ಅವರು ಭೇಟಿ ಕೊಟ್ಟು ಸಂವಾದ ನಡೆಸಿದರು.