ಸುದ್ದಿಮೂಲ ವಾರ್ತೆ
ಮೈಸೂರು, ಜೂ.21: ಮೊದಲ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನಕ್ಕೆ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ವಿತರಿಸಲು 25 ಸಾವಿರ ಸಿಹಿ ಮ್ಯಾಂಗೋ ಬರ್ಫಿ ಸಿದ್ಧವಾಗುತ್ತಿದೆ.
ಕಳೆದ 18 ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮಾಡುತ್ತಿರುವ ನೂರಡಿ ರಸ್ತೆಯ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ, ಈ ಬಾರಿಯೂ ಪ್ರಸಾದ ವಿತರಣೆ ಮಾಡುತ್ತಿದೆ. ಅದಕ್ಕಾಗಿ ಭಕ್ತರಿಗೆ ವಿತರಿಸಲು ಮ್ಯಾಂಗೋ ಬರ್ಫಿ ತಯಾರಾಗುತ್ತಿದೆ.
ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ 8 ಬಾಣಸಿಗರ ತಂಡದಿಂದ ಬರ್ಫಿ ತಯಾರಿಕೆ ಮಂಗಳವಾರ ಶುರುವಾಗಿದ್ದು, ಮೂರು ದಿನಗಳಲ್ಲಿ 25 ಸಾವಿರ ಭರ್ಪಿ ತಯಾರಿಕೆ ಕಾರ್ಯ ಪೂರ್ಣಗೊಳ್ಳಲಿದೆ.
30 ಕೆಜಿ ಮೈದಾ, 200 ಕೆಜಿ ಹಾಲುಕೋವಾ, 400 ಕೆಜಿ ಸಕ್ಕರೆ, 100 ಲೀಟರ್ ಮಾವಿನ ಹಣ್ಣಿನ ಪಲ್ಫ್, 3 ಕೆಜಿ ಪಿಸ್ತಾ, 5 ಕೆಜಿ ಬಾದಾಮಿ, 2 ಟಿನ್ ನಂದಿನಿ ತುಪ್ಪ, 30 ಕೆಜಿ ನಂದಿನಿ ಮಿಲ್ಕ್ ಪೌಡರ್ ಬಳಸಿ ಬರ್ಫಿ ತಯಾರಿಸಲಾಗುತ್ತಿದೆ. ಇದರ ಜವಾಬ್ದಾರಿಯನ್ನು ಆದಿತ್ಯ ಕೇಟರರ್ಸ್ ವಹಿಸಿಕೊಂಡಿದೆ ಎಂದು ಸಮಿತಿಯ ಸಂಚಾಲಕ ಎಸ್ಇಎಲ್ ರಾಜು ತಿಳಿಸಿದ್ದಾರೆ.
ಬೆಳಗ್ಗೆಯಿಂದಲೇ ಪ್ರಸಾದದ ವ್ಯವಸ್ಥೆ
ಬೆಟ್ಟದ ಪಾರ್ಕಿಂಗ್ ಜಾಗದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ, ಜೂ. 23ರಂದು ಬೆಳಗ್ಗೆಯಿಂದಲೇ ಪ್ರಸಾದ ವಿತರಣೆ ಆರಂಭವಾಗಲಿದೆ. ಅಂದು ಬೆಳಗ್ಗೆ ಉಪಹಾರಕ್ಕೆ ಫೈನಾಪಲ್ ಕೇಸರಿಬಾತ್, ಪೊಂಗಲ್, ರವಾ ವಾಂಗೀಬಾತ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಊಟಕ್ಕೆ ಕೋಸಂಬರಿ, ಪಲ್ಯಾ, ಬಿಸಿಬೇಳೇಬಾತ್, ಅನ್ನ ಸಾಂಬಾರ್, ಹಪ್ಪಳ, ಮೊಸರು ಹಾಗೂ ಮ್ಯಾಂಗೋಬರ್ಫಿ ವಿತರಿಸಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.