ಸುದ್ದಿಮೂಲ ವಾರ್ತೆ
ಭಾರತೀನಗರ, ಜೂ.8 :ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ಕಬ್ಬು ವಿಭಾಗದ ಕ್ಷೇತ್ರ ಸಿಬ್ಬಂದಿಗಳಿಗೆ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಣಿ ತಾಕೀತು ಮಾಡಿದರು.
ಇಲ್ಲಿನ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಅತಿಥಿ ಗೃಹದಲ್ಲಿ ನಡೆದ ಕಬ್ಬು ವಿಭಾಗದ ಕ್ಷೇತ್ರ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಕಬ್ಬಿನ ದರದ ಬಗ್ಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ರೈತರು ಬೆಳೆದ ಕಬ್ಬನ್ನು ಸಕಾಲಕ್ಕೆ ಕಾರ್ಖಾನೆಗೆ ಸಾಗಿಸುವ ಕೆಲಸಗಳನ್ನು ಕಟ್ಟುನಿಟ್ಟಾಗಿ ಮಾಡಬೇಕೆಂದು ಆದೇಶಿಸಿದರು.
ರೈತರಿಗೆ ಸಕಾಲದಲ್ಲಿ ಕಟಾವು ಆದೇಶವನ್ನು ನೀಡಿ ಯಾವುದೇ ತೊಂದರೆಯಾಗದಂತೆ ಕಾರ್ಖಾನೆಗೆ ಕಬ್ಬನ್ನು ಸರಬರಾಜು ಮಾಡಬೇಕು. ಕಾರ್ಖಾನೆ ತೆಗೆದುಕೊಂಡಿರುವ ಕಬ್ಬು ಅಭಿವೃದ್ದಿ ಕಾರ್ಯಕ್ರಮಗಳಾದ ಕಾಂಪೌಸ್ಟ್ ನೀಡುವುದು, ಹೊಸತಳಿ ಅಭಿವೃದ್ದಿ ಮತ್ತು ಮಾದರಿ ತಾಕುಗಳ ಅಭಿವೃದ್ದಿ ಮಾಡುವಂತಹ ಯೋಜನೆಯನ್ನ ರೈತರಿಗೆ ತಲುಪಿಸಬೇಕು. ರೈತರು ಹೆಚ್ಚು ಕಬ್ಬು ಇಳುವಳಿಯನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚು ಲಾಭವನ್ನು ಪಡೆಯುವ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕು ಎಂದರು.
ಕಬ್ಬು ಸರಬರಾಜು ಮಾಡಿದ ರೈತರಿಗೆ ತಿಂಗಳೊಳಗೆ ಸಕಾಲದಲ್ಲಿ ಹಣ ಬಟಾವಡೆ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ ಮುಂಗಡ ಹಣ 2864 ರೂ.ಗಳನ್ನು ನೀಡಲಾಗುವುದು ನಂತರ ಸರ್ಕಾರ ನಿಗಧಿಪಡಿಸುವ ಎಫ್ಆರ್ಪಿ ದರವನ್ನು ಕೊಡಲು ಆಡಳಿತ ಮಂಡಳಿ ಬದ್ದವಾಗಿದೆ ಎಂದರು.
ಇದೇ ವೇಳೆ ಕಬ್ಬು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಮಹದೇವುಪ್ರಭು, ವ್ಯವಸ್ಥಾಪಕರಾದ ಶಿವಪ್ಪ, ಹಿರಿಯ ಸಲಹೆಗಾರದಂತಹ ಗಣೇಶನ್, ಸಿ.ನಾಗರಾಜು, ಆಡಳಿತಾಧಿಕಾರಿ ನಿತೀಶ್, ನಿಂಗಯ್ಯ, ಸೇರಿದಂತೆ ಹಲವರಿದ್ದರು.