ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 1: ಜನರಿಗೆ ಬದುಕು ಕಟ್ಟಿಕೊಡುವ ಪ್ರಜಾ ಪ್ರಣಾಳಿಕೆಯನ್ನು ಬಿಜೆಪಿ ನೀಡಿದೆ. ಉಚಿತ ಯೋಜನೆಗಳಿಗೆ ಬಿಜೆಪಿ ಎಂದಿಗೂ ಪ್ರೋತ್ಸಾಹ ನೀಡುವುದಿಲ್ಲ, ಅದರಲ್ಲಿ ನಂಬಿಕೆಯೂ ಇಲ್ಲ. ಆದರೆ ಕೆಲ ವರ್ಗಗಳ ಸಬಲೀಕರಣಕ್ಕಾಗಿ ಮಾತ್ರ ನಿರ್ದಿಷ್ಟ ಯೋಜನೆ ನೀಡಲಾಗಿದೆ ಎಂದು ಪ್ರಣಾಳಿಕೆ ಸಮಿತಿ ಸಂಚಾಲಕರೂ ಆದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.
ಉಚಿತ ವಿದ್ಯುತ್, ಉಚಿತ ನೀರಿನ ಬಿಲ್, ಉಚಿತ ಬಸ್ ಶುಲ್ಕನಂತಹ ಯೋಜನೆಗಳು ಸಂಪೂರ್ಣ ಉಚಿತ ಯೋಜನೆಗಳಾಗಿವೆ. ನೀವು ಕೆಲಸ ಮಾಡದಿದ್ದರೂ ಪರವಾಗಿಲ್ಲ, ನಾವು ಎಲ್ಲವನ್ನೂ ಉಚಿತ ನೀಡುತ್ತೇವೆ ಎಂದು ಹೇಳಿಕೊಂಡು ಖಜಾನೆ ಖಾಲಿ ಮಾಡಲು ನಾವು ತಯಾರಿಲ್ಲ. ಆದರೆ ಗ್ಯಾಸ್ ಸಿಲಿಂಡರ್ ಉಚಿತವಾಗಿ ನೀಡಿದರೆ ಅದರಿಂದ ಮಹಿಳೆಯರ ಆರೋಗ್ಯ ರಕ್ಷಣೆಯಾಗುತ್ತದೆ. ಈ ರೀತಿ ಸಾಮಾಜಿಕ ಲಾಭವನ್ನು ನೋಡಿ ಯೋಜನೆಗಳನ್ನು ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ತಂದ ಉಜ್ವಲ ಯೋಜನೆಯಿಂದ ಅನೇಕ ಮಹಿಳೆಯರ ಆರೋಗ್ಯ ಸುಧಾರಿಸಿದೆ. ಮಹಿಳಾ ಸಬಲೀಕರಣಕ್ಕಾಗಿ ಮಾತ್ರ 3 ಸಿಲಿಂಡರ್ ನೀಡಲಾಗುವುದು ಎಂದರು.
ಕಾಂಗ್ರೆಸ್ ಕಲ್ಪಿತ ಬಂಡಲ್ ಭರವಸೆಗಳಿಗೆ ಜನರು ಸೊಪ್ಪು ಹಾಕುವುದಿಲ್ಲ. ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಇದೇ ರೀತಿ ಸುಳ್ಳು ಭರವಸೆ ನೀಡಿದ್ದಾರೆ. 11 ರಾಜ್ಯಗಳಲ್ಲಿ ಇದೇ ರೀತಿ ಭರವಸೆ ನೀಡಿಯೇ ಅಲ್ಲಿ ಕಾಂಗ್ರೆಸ್ ಸೋತಿದೆ. ಇದೇ ಪರಿಸ್ಥಿತಿ ರಾಜ್ಯದಲ್ಲೂ ಬರಲಿದೆ ಎಂದರು.
ಇಂದಿರಾ ಕ್ಯಾಂಟೀನ್ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. 100 ಜನರು ಆಹಾರ ಸೇವಿಸಿದರೆ 1,000 ಜನರು ಆಹಾರ ಸೇವಿಸಿದ ಬಿಲ್ ನೀಡಲಾಗಿದೆ. ಈ ರೀತಿ ಜನರ ಹಣ ಬಳಸಿ ಅಕ್ರಮ ಮಾಡಲಾಗಿದೆ. ಇದು ಯಾವುದೇ ದರ್ಶನಿಗಿಂತ ಭಿನ್ನವಲ್ಲ. ಆದರೆ ಅಟಲ್ ಕ್ಯಾಂಟೀನ್ನಲ್ಲಿ ಸಿರಿಧಾನ್ಯ, ಹಾಲು ಹಾಗೂ ಇತರೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದರು.
ಆಹಾರದ ಕಿಟ್
ಕೃಷಿ, ಆಹಾರ ಸಂಸ್ಕರಣೆ, ಸೇವಾ ವಲಯ, ಉತ್ಪಾದನಾ ವಲಯ, ಐಟಿ ಸೇರಿದಂತೆ ವಿವಿಧ ವಲಯಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇದೆ. ಅನ್ನ ಎಂದರೆ ಕೇವಲ 10 ಕೆಜಿ ಅಕ್ಕಿ ನೀಡುವುದಲ್ಲ. 5 ಕೆಜಿ ಅಕ್ಕಿ ಜೊತೆಗೆ, 5 ಕೆಜಿ ಸಿರಿಧಾನ್ಯ ಸೇರಿಸಲಾಗಿದೆ. ನಂದಿನಿ ಹಾಲು ಕೂಡ ನೀಡಿ ಸಂಪೂರ್ಣ ಆಹಾರದ ಕಿಟ್ಗಳನ್ನು ಪ್ರತಿ ತಿಂಗಳು ಬಡವರಿಗೆ ನೀಡಲಾಗುವುದು. ಇದರಿಂದ ಆರೋಗ್ಯಯುಕ್ತ ಕರ್ನಾಟಕ ನಿರ್ಮಾಣವಾಗಲಿದೆ. ಸಿರಿಧಾನ್ಯ ಹಾಗೂ ನಂದಿನಿ ಹಾಲು ನೀಡುವುದರಿಂದ ಈ ಉತ್ಪನ್ನಗಳಿಗೆ ಉತ್ತೇಜನ ಸಿಗುತ್ತದೆ. ಹಾಲಿಗೆ ಮೊದಲ ಬಾರಿಗೆ ಪ್ರೋತ್ಸಾಹಧನ ನೀಡಿದ್ದೇ ಬಿಜೆಪಿ ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಸುಮಾರು 6 ಲಕ್ಷ ಸಲಹೆ, ಆನ್ಲೈನ್ನಲ್ಲಿ 29 ಸಾವಿರ ಸಲಹೆಗಳು ಬಂದಿವೆ. ಸುಮಾರು 50 ಕ್ಷೇತ್ರಗಳ ಪರಿಣತರೊಂದಿಗೆ ಸಭೆ ನಡೆಸಲಾಗಿದೆ. ಈ ರೀತಿ ತಳಮಟ್ಟದಿಂದಲೇ ಪ್ರಣಾಳಿಕೆಗೆ ಸಲಹೆ ಸಂಗ್ರಹಿಸಲಾಗಿದೆ. ಅಲ್ಲದೆ, ರಾಜ್ಯದ ಆರ್ಥಿಕ ವ್ಯವಸ್ಥೆ ಅಧ್ಯಯನ ಮಾಡಿ ಭರವಸೆ ರೂಪಿಸಲಾಗಿದೆ. ಇತರೆ ಪಕ್ಷಗಳು ಸುಳ್ಳು ಭರವಸೆ ನೀಡಿ ಚುನಾವಣೆ ಗೆಲ್ಲಲು ನೋಡುತ್ತಿವೆ. ಅಂತಹ ಕೆಲಸವನ್ನು ಬಿಜೆಪಿ ಮಾಡಿಲ್ಲ ಎಂದರು.