ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.30: ಕನ್ನಡ ಸಾಹಿತ್ಯ ಪರಿಷತ್ತು ಪ್ರದಾನ ಮಾಡುವ ʻಶತಮಾನೋತ್ಸವ ದತ್ತಿ ಪ್ರಶಸ್ತಿʼಯ 2022ನೇ ಸಾಲಿನ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಮನು ಬಳಿಗಾರ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯು 50 ಸಾವಿರ ನಗದು ಹೊಂದಿದೆ. ಮೇ 5 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಾಗಿ ಮಿಸಲಿಟ್ಟಿರುವ ʻಶ್ರೀಮತಿ ಎನ್. ರಮಾದೇವಿ ವಿಶ್ವೇಶ್ವರಯ್ಯ ದತ್ತಿʼ ಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಹೆಚ್. ಮಂಜುಳಾ, ʻಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಸಿಬ್ಬಂದಿ ಸೇವಾ ದತ್ತಿʼ ಪ್ರಶಸ್ತಿಗಾಗಿ ಎನ್. ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ದತ್ತಿನ ದಾನಿಗಳು ಈ ಬಾರಿ ಹೆಚ್ಚುವರಿಯಾಗಿ ಮೂರು ಜನ ಕನ್ನಡ ಸಾಹಿತ್ಯ ಪರಿಷತ್ತಿನ ನಿವೃತ್ತ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಅದಕ್ಕಾಗಿ ಕಸಾಪ ಎ. ಅಮರನಾಥ್, ನಾ. ಚಕ್ರಪಾಣಿ ಹಾಗೂ ಕೆ. ರಾಮೇಗೌಡ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.