ಸುದ್ದಿಮೂಲವಾರ್ತೆ ಮಾನ್ವಿ ಏ-20
ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವಿ.ನಾಯಕ ಗುರುವಾರ ಅಪಾರ ಜನ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
ವಾಲ್ಮೀಕಿ ವೃತ್ತದಿಂದ ತಹಸೀಲ್ ಕಚೇರಿವರೆಗೆ ಭಾರಿ ಪ್ರಮಾಣದ ಮೆರವಣಿಗೆ ನಡೆಸಿ ಟಿಎಪಿಸಿಎಂಎಸ್ ಆವರಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು.ನಂತರ ತಹಸೀಲ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಟಿಎಪಿಸಿಎಂಎಸ್ ಆವರಣದಲ್ಲಿ ಅಪಾರ ಜನರನ್ನುದ್ದೇಶಿಸಿ ಮಾತನಾಡಿದ ದೇವದುರ್ಗದ ಶಾಸಕ ಕೆ.ಶಿವನಗೌಡ ನಾಯಕ ಮಾನ್ವಿಯ ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕ ಇವರನ್ನು ನೀವು ಗೆಲ್ಲಿಸಬೇಕು. ನಾನು ಮತ್ತು ನಮ್ಮ ಮಾವ ಬಿ.ವಿ.ನಾಯಕ 20 ವರ್ಷಗಳ ನಂತರ ಒಂದೇ ವೇದಿಕೆಯ ಮೇಲೆ ಸೇರಿದ್ದೇವೆ. ರಾಜಕೀಯದಲ್ಲಿ ಯಾರೂ ಯಾರಿಗೆ ಶಾಶ್ವತ ವೈರಿಗಳಲ್ಲ, ಶಾಶ್ವತ ಸ್ನೇಹಿತರೂ ಅಲ್ಲ. ಇಲ್ಲಿ ಎಲ್ಲಾ ಶಕ್ತಿಗಳ ಸಂಗಮವಾಗಿದೆ. ಈ ಶಕ್ತಿಯನ್ನು ಯಾರೂ ಕುಗ್ಗಿಸಲಾರರು. ನಾನೂ ಮಾನ್ವಿ ಕ್ಷೇತ್ರದ ಕಸನದೊಡ್ಡಿ ಗ್ರಾಮದವನು. ಬಿ.ವಿ.ನಾಯಕ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ. ಅವರನ್ನು
ಗೆಲ್ಲಿಸಿದರೆ ಮಾನ್ವಿ ಕ್ಷೇತ್ರ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವೆ. ಬಿ.ವಿ.ನಾಯಕ ಅವರನ್ನು ಗೆಲ್ಲಿಸಿದರೆ ಈ ಕ್ಷೇತ್ರಕ್ಕೆ 25 ಸಾವಿರ ಮನೆಯನ್ನು ಸರಕಾರದಿಂದ ಕೊಡಿಸುತ್ತೇನೆ. ಕ್ಷೇತ್ರದ ಪ್ರತಿ ಬೂತ್ ಗೆ ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳಿಗೆ 20 ರಿಂದ 30 ಕೋ.ರೂ.ಮಂಜೂರು ಮಾಡಿಸಿವೆ.
ನೀವೆಲ್ಲರೂ ಹುಲಿ ಮರಿಗಳು ಇದ್ದಂತೆ.
ಹುಲಿಯನ್ನು ಬೇರೆ ಪ್ರಾಣಿಗಳು ಬೇಟೆಯಾಡುವುದಿಲ್ಲ. ಹಾಗಾಗಿ ನೀವು ಹುಲಿ ಮರಿಗಳು. ನಾನು ಲೋಕಸಭಾ ಚುನಾವಣೆಗೆ ನಿಂತಾಗ ಈ ಕ್ಷೇತ್ರದಲ್ಲಿ 11 ಸಾವಿರ ಮತ ಲೀಡ್ ಕೊಟ್ಟಿದ್ದೀರಿ. ರಾಜಾ ಅಮರೇಶ್ವರ ನಾಯಕ ನಿಂತಾಗ 23 ಸಾವಿರ ಮತ ಲೀಡ್ ಕೊಟ್ಟಿದ್ದೀರಿ. ಆ ಪ್ರಕಾರ ಈ ವಿಧಾನಸಭಾ ಚುನಾವಣೆಯಲ್ಲಿ ಬಿ.ವಿ.ನಾಯಕರಿಗೆ 50 ಸಾವಿರ ಮತಗಳ ಲೀಡ್ ಕೊಡಬೇಕು. ಅದಕ್ಕಾಗಿ ಬರುವ 20 ದಿನಗಳ ಕಾಲ ಹಗಲಿರುಳು ಶ್ರಮಿಸಬೇಕು ಎಂದು ಶಿವನಗೌಡ ನಾಯಕ ಹೇಳಿದರು.
ನೀವು ಇಲ್ಲಿ ಬಿ.ವಿ.ನಾಯಕರನ್ನು ಗೆಲ್ಲಿಸಿ ಬಿಜೆಪಿ ಸರಕಾರ ರಚನೆ ಮಾಡಲು ಅವಕಾಶ ಕೊಟ್ಟರೆ ಈ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೆ ಉತ್ತಮ ರಸ್ತೆ ನಿರ್ಮಿಸುವೆ. ಈಗಾಗಲೇ ನಾನೇ ಸರಕಾರದ ಮೇಲೆ ಒತ್ತಡ ಹಾಕಿ ಮಾನ್ವಿ ತಾಲೂಕಿನ ಹಳ್ಳಿಗಳಿಗೆ 9 ಆಸ್ಪತ್ರೆ ಮಂಜೂರು ಮಾಡಿಸಿರುವೆ. ನನ್ನ ಹುಟ್ಟು ಹಬ್ಬದ ದಿನಾಚರಣೆಯಂದು ಕೊಟ್ಟ ಮಾತಿನಂತೆ ಚೀಕಲಪರ್ವಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸುವೆ. ಈಗಾಗಲೇ ಇದಕ್ಕೆ ಡಿ.ಪಿ.ಆರ್ ಮಾಡಿಸಿ 180 ಕೋಟಿ ರೂಪಾಯಿ ಆಡಳಿತಾತ್ಮಕ ಮಂಜೂರು ಮಾಡಿಸಿದ್ದೇನೆ. ನಮಗೆ ಮಾನ್ವಿ ಕ್ಷೇತ್ರದ ಬಗ್ಗೆ ಅಭಿವೃದ್ಧಿ ಚಿಂತನೆ ಇದೆ. ಇಲ್ಲಿ ರೇಲ್ವೆ ಯೋಜನೆ ಆಗಬೇಕು.
ತುಂಗಭದ್ರಾ ಎಡದಂಡೆ ಕಾಲುವೆ ಟೇಲೆಂಡ್ ಸಮಸ್ಯೆ ಪರಿಹರಿಸುವೆ. ನಮ್ಮನ್ನು ಬಿಟ್ಟು ಟೇಲೆಂಡ್ ಸಮಸ್ಯೆಯನ್ನು ಯಾರಿಂದಲೂ ಬಗೆಹರಿಸಲು ಸಾಧ್ಯವಿಲ್ಲ. ನಮ್ಮಂತ ಶೂರರಿಂದ ಮಾತ್ರ ಸಾಧ್ಯ. ಅದಕ್ಕಾಗಿ ನಮ್ಮಂತ ಶೂರರಿಗೆ ಓಟು ಕೊಡಿ ಹೇಡಿಗಳಿಗೆ ಓಟು ಕೊಡಬೇಡಿ. ನಮ್ಮ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಅಧಿಕಾರಕ್ಕೆ ಬರುತ್ತಿದ್ದಂತೆ ನವಲಿ ಜಲಾಶಯಕ್ಕೆ 20 ಸಾವಿರ ಕೋಟಿ ರೂ. ಕೊಡಿಸುತ್ತೇವೆ. ಟೇಲೆಂಡ್ ಸಮಸ್ಯೆಯನ್ನು ರಕ್ತ ಕೊಟ್ಟಾದರೂ ಬಗೆ ಹರಿಸುತ್ತೇನೆ. ಸದನದಲ್ಲಿಯಾಗಲಿ, ಸಿಎಂ ಮನೆ ಮುಂದೆ ಆದರೂ ಈ ಸಮಸ್ಯೆಗೆ ಪರಿಹಾರ ನೀಡುತ್ತೇನೆ. ಅದಕ್ಕಾಗಿ ನೀವು ಬಿ.ವಿ.ನಾಯಕ ಇವರನ್ನು ಗೆಲ್ಲಿಸಬೇಕು. ಮತ್ತು ಬಿಜೆಪಿಗೆ ಶಕ್ತಿ ತುಂಬಬೇಕು ಎಂದು ಶಿವನಗೌಡ ನಾಯಕ ಪದೇ ಪದೇ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕರಾದ ತಿಪ್ಪರಾಜು ಹವಾಲ್ದಾರ್, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ ಮಾನ್ವಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕ ಅವರನ್ನು ಗೆಲ್ಲಿಸಬೇಕೆಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕ ಮಾತನಾಡಿ ನಿಮ್ಮನ್ನು ನಂಬಿ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಬಿಟ್ಟು ಬಂದ ಪಕ್ಷದಲ್ಲಿನ ಕೆಲವು ಕಿಡಿಕೇಡಿಗಳ ಕೃತ್ಯದಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅದಕ್ಕಾಗಿ ನಾನು ಪಕ್ಷ ಬಿಡಬೇಕಾಯಿತು. ಇಲ್ಲಿ ಸ್ವಾಭಿಮಾನದ ಎಲ್ಲಾ ಶಕ್ತಿಗಳು ಒಂದಾಗಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಜಿಲ್ಲೆಯ ಏಳು ಕ್ಷೇತ್ರಗಳನ್ನು ಗೆಲ್ಲುತ್ತೇವೆ. ನಾನು ಅಧಿಕಾರಕ್ಕಾಗಿ ಬಂದಿಲ್ಲ. ಜಿಲ್ಲೆಯ ಜನತೆಗೆ ಏನಾದರೂ ಒಳ್ಳೆಯದು ಮಾಡಬೇಕೆಂಬ ಹಂಬಲದಿಂದ ಬಂದಿದ್ದೇನೆ. ನಾನೆಂದೂ ಕೆಟ್ಟದ್ದು ಮಾಡಿಲ್ಲ. ಮಾಡುವುದೂ ಇಲ್ಲ. ಒಳ್ಳೆಯದನ್ನು ಮಾಡಬೇಕೆಂದು ನಮ್ಮ ತಂದೆ ಕಲಿಸಿದ್ದಾರೆ. ನನ್ನನ್ನು ಆರಿಸಿದರೆ ಎಲ್ಲರ ಸಹಕಾರ ಪಡೆದು ನವಲಿ ಜಲಾಶಯಕ್ಕಾಗಿ ಶ್ರಮಿಸುತ್ತೇನೆ. ಸ್ವಾಭಿಮಾನವನ್ನು ಸವಾಲಾಗಿ ಸ್ವೀಕರಿಸಿ ಬಂದಿದ್ದೇನೆ. ನಾನು ಮರ್ಯಾದೆಗಾಗಿ ರಾಜಕೀಯ ಮಾಡುತ್ತೇನೆ. ಸ್ವಾಭಿಮಾನಕ್ಕೆ ಮುದ್ರೆ ಒತ್ತಿ ನನಗೊಂದು ಬಾರಿ ಈ ಕ್ಷೇತ್ರದಿಂದ ಅವಕಾಶ ನೀಡಿ ಎಂದು ಬಿ.ವಿ.ನಾಯಕ ಮನವಿ ಮಾಡಿದರು.
ವೇದಿಕೆಯ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ತೆಲಂಗಾಣ ಲೋಕಸಭಾ ಸದಸ್ಯ ಇಂದ್ರಸೇನಾ ರೆಡ್ಡಿ, ಮಾನ್ವಿ ಕ್ಷೇತ್ರದ ಉಸ್ತುವಾರಿ ಕೀರ್ತಿ ರೆಡ್ಡಿ, ಮುಖಂಡರಾದ ಜೆ.ಶರಣಪ್ಪಗೌಡ, ಕೆ.ಬಸವಂತಪ್ಪ, ಮಾನಪ್ಪ ನಾಯಕ, ಶೇಷರೆಡ್ಡಿ ಕವಿತಾಳ, ಕೊಟ್ರೇಶಪ್ಪ ಕೋರಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಮಲ್ಲನಗೌಡ ನಕ್ಕುಂದಿ, ತಿಮ್ಮಾರೆಡ್ಡಿ ಭೋಗಾವತಿ, ಶರಣಪ್ಪಗೌಡ ನಕ್ಕುಂದಿ, ಜಯರಾಜ ಬಾದರದಿನ್ನಿ, ಕುಮಾರಸ್ವಾಮಿ ಪೋತ್ನಾಳ್, ವೀರೇಶ ನಾಯಕ ಬೆಟ್ಟದೂರು, ಉಮೇಶ ಸಜ್ಜನ್, ಅಯ್ಯಪ್ಪ ನಾಯಕ ಮ್ಯಾಕಲ್, ಶಿವರಾಜ ಜಾನೇಕಲ್, ಅರುಣ್ ಚಂದಾ, ಶ್ರೀಕಾಂತ ಗೂಳಿ, ಗುರುಗೌಡ, ಸೇರಿದಂತೆ ಅನೇಕ ಮುಖಂಡರು, ಮಹಿಳೆಯರು, ಯುವಕರು, ಅಪಾರ ಸಂಖ್ಯೆಯ ಕಾರ್ಯಕರ್ತರು, ಭಾಗವಹಿಸಿದ್ದರು.