ಸುದ್ದಿಮೂಲ ವಾರ್ತೆ
ರಾಮನಗರ, ಜು 10 : ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ದೇಶ ಅಥವಾ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯಕ್ಕೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಖವಾಡ ಧರಿಸಿ, ದಲ್ಲಾಳಿಗಳಂತೆ ವರ್ತಿಸುವುದನ್ನು ಬಿಡುವವರೆಗೂ ಇದು ಸಾಧ್ಯವಾಗವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ನಡೆದ ಬಹುಜನ ಸಮಾಜ ಪಕ್ಷದ ಜಿಲ್ಲಾ ಕಾರ್ಯಕರ್ತರ ಸಭೆ ಮತ್ತು ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಶಾಸಕರು, ಸಂಸದರು ಆಗಲಿಲ್ಲ. ಈ ವಿಚಾರದಲ್ಲಿ ಆತ್ಮ ವಿಮರ್ಶೆ ಅಗತ್ಯ ಎಂದರು.
ಬಾಬಾ ಸಾಹೇಬರು ನೀಡಿದ ವಿಶ್ವದಲ್ಲೇ ಮಾದರಿ ಸಂವಿಧಾನಕ್ಕೆ ಬೆಲೆ ಇಲ್ಲದಂತಾಗುತ್ತಿದೆ ಎಂದು ಕಿಡಿಕಾರಿದ ಅವರು ಜಾತಿ, ಧರ್ಮ, ಪಂಗಡ ಆಧಾರಿತ ಆಡಳಿತ ನಡೆಸುತ್ತಿರುವುದನ್ನು ಉಲ್ಲೇಖಿಸಿದರು.ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬಡವರ ಸುಧಾರಣೆಗಾಗಿ ಆಡಳಿತ ನಡೆಸಲಿಲ್ಲ. ಬಡವರನ್ನು ಬಡವರಾಗಿಯೇ ಉಳಿಸಿ ಶ್ರೀಮಂತರ ಉದ್ಧಾರ ಮಾಡಿವೆ. 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್, 9 ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಪಕ್ಷಗಳು ಜಾತಿ ಧರ್ಮಗಳ ನಡುವೆ ವೈಷಮ್ಯದ ಬೀಜವನ್ನು ಬಿತ್ತಿ ದೇಶದ ಏಕತೆಗೆ ಧಕ್ಕೆ ತಂದಿವೆ ಎಂದರು.
ಬಿಎಸ್ಪಿ ಪಕ್ಷದ ರಾಜ್ಯ ಖಜಾಂಚಿ ಡಾ|.ಚಿನ್ನಪ್ಪ ಚಿಕ್ಕ ಹಾಗಡೆ ಮಾತನಾಡಿ, ಪ್ರಸ್ತುತ ಚುನಾವಣೆಯಲ್ಲಿ ವಿಜೇತರಾದ ರಾಜಕಾರಣಿಗಳು ಸಂವಿಧಾನದ ತತ್ವ-ಸಿದ್ದಾಂತಗಳಿಗೆ ಅನುಗುಣವಾಗಿ ನಡೆದುಕೊಳ್ಳದಿರುವುದು ಶೊಚನೀಯ ಸಂಗತಿಯಾಗಿದೆ. ಕ್ಷೇತ್ರ ಚುನಾಯಿತ ಪ್ರತಿನಿಧಿಗಳು ಉದ್ಯೋಗ ಖಾತ್ರಿಯ ಯೋಜನೆಗಳ ಕಾಮಗಾರಿಗಳನ್ನು ತಮ್ಮ ಪಕ್ಷದ ಹಿಂಬಾಲಕರಿಗೆ ದೊರೆಯುವಂತೆ ಮಾಡುತ್ತಿದ್ದಾರೆ ಎಂದು ವಿಷಾಧಿಸಿದರು.
ಕಾರ್ಯಕ್ರಮದಲ್ಲಿ ಬಿಎಸ್ಪಿ ಮುಖಂಡರಾದ ಆರ್. ಮುನಿಯಪ್ಪ, ಬಿ. ಅನ್ನದಾನಪ್ಪ, ಎಂ. ಕೃಷ್ಣಪ್ಪ, ಎಂ. ನಾಗೇಶ್, ಗೌರಮ್ಮ ಶಿವಲಿಂಗೇಗೌಡ ಉಪಸ್ಥಿತರಿದ್ದರು.