ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 17 : ಈಗೀನ ರಾಜ್ಯ ಕಾಂಗ್ರೆಸ್ ಸರಕಾರ ಬಡವರಿಗೆ ನಿವೇಶನ ಹಂಚಿಕೆ, ಉತ್ತಮ ಶಿಕ್ಷಣ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿ ಮತ್ತು ಜನರಿಗೆ ಅತೀ ಮುಖ್ಯವಾದ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕೆಂದು ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿಯ ವತಿಯಿಂದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಕಾನ್ಷಿರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸರ್ಕಾರಗಳು ಬಡವರಿಗೆ ಮತ್ತು ಮದ್ಯಮ ವರ್ಗದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದರಲ್ಲಿ ವಿಫಲವಾಗಿವೆ. ಬಿಜೆಪಿ ಪಕ್ಷವು ರಾಜ್ಯದಲ್ಲಿ 4 ವರ್ಷ ಅಧಿಕಾರದಲ್ಲಿ ದುರಾಡಳಿತ ನಡೆಸಿದೆ. ಇವರ ಅವಧಿಯಲ್ಲಿ ಮುಸಲ್ಮಾನರ ಕೊಲೆಗಳು, ಕ್ರಿಶ್ಚಿಯನ್ನರ ಮೇಲೆ ಹಲ್ಲೆಗಳು, ಚರ್ಚ್ಗಳ ಮೇಲೆ ಹಲ್ಲೆಗಳು, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೀಗೆ ಹಲವಾರು ಘಟನೆಗಳು ನಡೆದಿದೆ ಎಂದು ಬಿಜೆಪಿಯ ಆಡಳಿತ ವೈಖರಿ ವಿರುದ್ಧ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ವಾಗ್ದಾಳಿ ನಡೆಸಿದರು.
ರಾಜ್ಯ ಬಿಎಸ್ಪಿ ಕಾರ್ಯದರ್ಶಿ ನಂದಿಗುಂದ.ಪಿ.ವೆಂಕಟೇಶ್ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟ ಜಮೀನುಗಳ ಬಗ್ಗೆ ಸುಮಾರು ಪ್ರಕರಣಗಳನ್ನು ಜಿಲ್ಲಾಧಿಕಾರಿಗಳು ವಜಾಗೊಳಿಸಿರುತ್ತಾರೆ. ಪಿಟಿಸಿಎಲ್ ಆಕ್ಟ್ ತಿದ್ದುಪಡಿಯನ್ನು ಅತೀ ಜರೂರಾಗಿ ಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಬಿಎಸ್ಪಿ ಕಾರ್ಯದರ್ಶಿ ಬಸವರಾಜು, ಜಿಲ್ಲಾಧ್ಯಕ್ಷ ಎಂ.ಮಹದೇವ್, ತಿಮ್ಮರಾಜು, ಜಿಲ್ಲಾ ಕಾರ್ಯದರ್ಶಿ ಗೋಪಾಲ್, ದ್ಯಾವಪ್ಪ, ರಮಾದೇವಿ, ಹೇಮಾ ಚಕ್ರಪಾಣಿ, ಲಕ್ಷ್ಮೀ ನಾರಾಯಣ್, ಪಿಳ್ಳಪ್ಪ, ಸುವರ್ಣ ಸೇರಿದಂತೆ ಪದಾಧಿಕಾರಿಗಳುಇದ್ದರು.