ಸುದ್ದಿಮೂಲ ವಾರ್ತೆ
ಚಿಂತಾಮಣಿ,ಆ.26: ಜಿಲ್ಲೆಯ ಚಿಂತಾಮಣಿ ತಾಲೂಕಿನ ಪ್ರಸಿದ್ದ ಆಲಂಬಗಿರಿ ಕ್ಷೇತ್ರದ ಕಲ್ಕಿ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜಾ ವ್ರತವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ದೇವಾಲಯದ ಆವರಣದಲ್ಲಿರುವ ಲಕ್ಷ್ಮಿ ಅಮ್ಮನವರ ದೇವಾಲಯದ ಮುಂಭಾಗದಲ್ಲಿ ಸಾಮೂಹಿಕ ವರಮಹಾಲಕ್ಷೀ ಪೂಜಾವ್ರತದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗ್ರಾಮಸ್ಥರು ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಮಾಡಿದರು. ಆಗಮಿಸಿದ್ದ ಪ್ರತಿಯೊಬ್ಬ ಮುತ್ತೈದೆಯರಿಗೂ ಪೂಜಾ ಸಾಮಾಗ್ರಿಗಳನ್ನು ಶ್ರೀಯೋಗಿನಾರೇಯಣ ಮಠದ ವತಿಯಿಂದ ಒದಗಿಸಲಾಗಿತ್ತು. ಅರ್ಚಕ ವೃಂದದವರು ಲಕ್ಷ್ಮಿ ಅಷ್ಟೋತ್ತರವನ್ನು ಹೇಳುತ್ತಿದ್ದರೆ, ಮುತ್ತೈದೆಯರು ಕುಳಿತಲ್ಲಿಯೇ ಕುಂಕುಮಾರ್ಚನೆಯನ್ನು ಶ್ರದ್ದಾ ಭಕ್ತಿಗಳಿಂದ ಪೂಜಿಸಿದರು.
ಸರ್ವಾಲಂಕೃತವಾದ ಪೀಠದಲ್ಲಿ ಲಕ್ಷ್ಮಿ ಅಮ್ಮನವರನ್ನು ಆಸೀನಗೊಳಿಸಲಾಗಿತ್ತು. ನೂತನ ವಸ್ತ್ರಾಭರಣ ಹಾಗೂ ವಿವಿಧ ಬಗೆಯ ಹೂಗಳಿಂದ, ಅಮ್ಮನವರನ್ನು ಸಿಂಗರಿಸಲಾಗಿತ್ತು. ಸಭಾಪ್ರಾರ್ಥನೆ, ವಿಶ್ವಕ್ಸೇನ ಪೂಜಾ, ಕಲಶಾರಾಧನೆ, ಪೀಠಪೂಜೆ, ದ್ವಾರಪಾಲಕ ಪೂಜೆ, ಪ್ರಾಣಪ್ರತಿಷ್ಠೆ, ಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ ಪೂಜೆ, ಧೂಪ, ದೀಪ ನೈವೇದ್ಯಗಳನ್ನು ಸಮರ್ಪಿಸಲಾಯಿತು. ಅಷ್ಟಾವಧಾನ ಸೇವೆಯನ್ನು ನೆರವೇರಿಸಿ ಮಂಗಳಾರತಿಗಳನ್ನು ಬೆಳಗಲಾಯಿತು. ತೀರ್ಥಪ್ರಸಾದಗಳನ್ನು ವಿತರಿಸಲಾಯಿತು. ಗರ್ಭಗುಡಿಯಲ್ಲಿರುವ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.
ಪೂಜೆಯ ಅಂಗವಾಗಿ ವೇದಿಕೆಯಲ್ಲಿ ವರಮಹಾಲಕ್ಷ್ಮಿ ಅಮ್ಮನವರ ವಿಗ್ರಹ ಮತ್ತು ಶ್ರೀ ವೆಂಕಟರಮಣಸ್ವಾಮಿ ವಿಗ್ರಹವನ್ನು ಸರ್ವಾಲಂಕೃತವಾಗಿ ಅಲಂಕರಿಸಲಾಗಿತ್ತು. ಲಕ್ಷ್ಮಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಆಲಂಕಾರವನ್ನು ಮಾಡಲಾಗಿತ್ತು.
ಈ ಶುಭ ದಿನದಂದು ಭಾಗವಹಿಸಿದ್ದ ಭಕ್ತಾದಿಗಳು ಸೇವಾ ಕೈಂಕರ್ಯಗಳಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಭಾಗ್ಯವನ್ನು ಪಡೆದು ಕೃತಾರ್ಥರಾದರು. ಈ ವರಮಹಾ ಲಕ್ಷ್ಮಿ ಪೂಜೆಯಲ್ಲಿ ಕೈವಾರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ದಂಪತಿಗಳು ಭಾಗವಹಿಸಿದ್ದರು.