ಸುದ್ದಿಮೂಲ ವಾರ್ತೆ
ನವದೆಹಲಿ, ಆ.9: ಸಂಸತ್ ಮರುಪ್ರವೇಶದ ನಂತರ ಲೋಕಸಭೆಯಲ್ಲಿ ಗುಡುಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಣಿಪುರದಲ್ಲಿ ಭಾರತ ಮಾತೆಯ ಕಗ್ಗೊಲೆ ನಡೆದಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಲೋಕಸಭೆಯಲ್ಲಿ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಬುಧವಾರ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ನಾನು ಮಣಿಪುರಕ್ಕೆ ಹೋಗಿದ್ದೆ. ಆದರೆ ನಮ್ಮ ಪ್ರಧಾನಿ ಇನ್ನೂ ಅಲ್ಲಿಗೆ ಹೋಗಿಲ್ಲ. ಅವರ ಪ್ರಕಾರ ಮಣಿಪುರ ಎಂದರೆ ಭಾರತವಲ್ಲ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಇಡೀ ಜಗತ್ತು ನೋಡುವಂತೆ ಹಿಂಸಾಚಾರ ನಡೆಯುತ್ತಿದ್ದರೂ ಸಹ ನಮ್ಮ ಪ್ರಧಾನಿಯವರು ಇದುವರೆಗೂ ಒಂದು ಬಾರಿಯೂ ಹೋಗಲು ಸಮಯ ಸಿಕ್ಕಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಾನು ‘ಮಣಿಪುರ’ ಎಂಬ ಪದವನ್ನು ಬಳಸಿದ್ದೇನೆ. ಆದರೆ, ಮಣಿಪುರ ಇನ್ನು ಉಳಿಯುವುದಿಲ್ಲ ಎಂಬುದು ಸತ್ಯ. ಮಣಿಪುರವನ್ನು ಎರಡು ಭಾಗ ಮಾಡಿದ್ದೀರಿ. ನೀವು ಮಣಿಪುರವನ್ನು ವಿಭಜಿಸಿದ್ದೀರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಮಣಿಪುರದ ಶಿಬಿರಗಳಲ್ಲಿ ನಾನು ಮಹಿಳೆಯರು, ಮಕ್ಕಳೊಂದಿಗೆ ಮಾತನಾಡಿದ್ದೇನೆ. ಪ್ರಧಾನಿ ಮೋದಿ ಇಲ್ಲಿಯವರೆಗೆ ಏನೂ ಮಾಡಿಲ್ಲ. ನಾನು ಮಹಿಳೆಯೊಬ್ಬರನ್ನು ‘ನಿಮಗೆ ಏನಾಯಿತು’ ಎಂದು ಕೇಳಿದೆ, ಅದಕ್ಕೆ ಅವರು, ‘ನನ್ನ ಒಬ್ಬನೇ ಮಗನನ್ನು ನನ್ನ ಕಣ್ಣುಗಳ ಮುಂದೆ ಗುಂಡು ಹಾರಿಸಿ ಕೊಂದರು. ನಾನು ರಾತ್ರಿಯಿಡೀ ಅಳುತ್ತಾ ಅವನ ಶವದೊಂದಿಗೆ ಮಲಗಿದೆ, ನಾನು ಎಲ್ಲವನ್ನೂ ಬಿಟ್ಟು ಮನೆಯಿಂದ ಹೊರಬಂದೆ, ಅಲ್ಲಿರಲು ನನಗೆ ಭಯವಾಯಿತು.” ಎಂದು ಹೇಳಿದರು. ನಾನು “ಏನಾದರೂ ತಂದಿದ್ದೀರಾ?” ಎಂದು ಕೇಳಿದೆ, ಅದಕ್ಕೆ ಆಕೆ “ನನ್ನ ಬಳಿ ಇರುವುದು ನಾನು ಧರಿಸಿರುವ ಬಟ್ಟೆ ಮತ್ತು ಫೋಟೋ’, ಎಂದು ಹೇಳಿದರು ಎಂದು ಮಣಿಪುರದ ಕರಾಳ ಸ್ಥಿತಿಯನ್ನು ಲೋಕಸಭೆಯಲ್ಲಿ ಬಿಚ್ಚಿಟ್ಟರು.
ಬಿಜೆಪಿ ಮಣಿಪುರದಲ್ಲಿ ಭಾರತವನ್ನು ಕೊಂದಿದೆ ಮತ್ತು ಈಗ ಹರಿಯಾಣಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದೆ. ನೀವು ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ. ಬಿಜೆಪಿಯವರು ದೇಶಾದ್ಯಂತ ಸೀಮೆಎಣ್ಣೆ ಸುರಿಯುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ಮೋದಿ ಹಿಂದೂಸ್ತಾನದ ಧ್ವನಿಯನ್ನು ಕೇಳದಿದ್ದರೆ, ಅವರು ಯಾರನ್ನು ಕೇಳುತ್ತಾರೆ? ಅವರು ಕೇವಲ ಇಬ್ಬರ ಮಾತುಗಳನ್ನು ಕೇಳುತ್ತಾರೆ. ರಾವಣ ಕೇವಲ ಇಬ್ಬರ ಮಾತನ್ನು ಕೇಳಿದನು. ಮೇಘನಾಥ ಮತ್ತು ಕುಂಬಕರ್ಣ ಅವರ ಮಾತುಗಳನ್ನು ಆಲಿಸಿದನು. ಅದೇ ರೀತಿ ಮೋದಿ ಕೂಡ ಅಮಿತ್ ಶಾ ಮತ್ತು ಅದಾನಿ ಮಾತುಗಳನ್ನು ಮಾತ್ರ ಕೇಳುತ್ತಾರೆ. ರಾವಣ ರಾಮನಿಂದ ಸಾಯಲಿಲ್ಲ. ಬದಲಿಗೆ ತನ್ನ ಅಹಂಕಾರದಿಂದ ಸತ್ತಿದ್ದು ಎಂದು ಸೂಚ್ಯವಾಗಿ ಹೇಳುವ ಮೂಲಕ ವಾಗ್ದಾಳಿ ನಡೆಸಿದರು.
ಸ್ಪೀಕರ್ಗೂ ಛೇಡಿಸಿದ ರಾಹುಲ್
ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ರಾಹುಲ್ಗಾಂಧಿ, ಹಿಂದಿನ ಸಂಸತ್ತಿನ ಅಧಿವೇಶನದಲ್ಲಿ ಭಾಷಣವನ್ನು ಉಲ್ಲೇಖಿಸಿ, ಸ್ಪೀಕರ್ ಅವರು ಈಗ ರಿಲ್ಯಾಕ್ಸ್ ಆಗಬಹುದು. ನನ್ನ ಇಂದಿನ ಭಾಷಣ ಅದಾನಿ ಬಗ್ಗೆ ಅಲ್ಲ. ನೀವು (ಬಿಜೆಪಿ) ಹೆದರುವ ಅಗತ್ಯವಿಲ್ಲ ಎಂದು ಮಾತು ಆರಂಭಿಸಿದರು.
‘ಸಭಾಧ್ಯಕ್ಷರೇ, ನನ್ನ ಸದಸ್ಯತ್ವ ಮರು ಪ್ರತಿಷ್ಠಾಪಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಕೊನೆಯ ಬಾರಿ ಮಾತನಾಡಿದಾಗ, ನಿಮ್ಮ ಹಿರಿಯ ನಾಯಕರಿಂದಾಗಿ ನಾನು ಅದಾನಿ ಮೇಲೆ ಹೆಚ್ಚು ಗಮನಹರಿಸಿದ್ದರಿಂದ ನಾನು ನಿಮಗೆ ನೋವುಂಟು ಮಾಡಿರಬಹುದು. ಇಂದು ನಾನು ಅದಾನಿ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಫ್ಲೈಯಿಂಗ್ ಕಿಸ್: ವಿವಾದ
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಪರ ಮಾತನಾಡಿದ ರಾಹುಲ್ ಗಾಂಧಿ ಲೋಕಸಭೆಯಿಂದ ನಿರ್ಗಮಿಸುವ ವೇಳೆ ಬಿಜೆಪಿ ಸಂಸದರತ್ತ ಫ್ಲೈಯಿಂಗ್ ಕಿಸ್ ನೀಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.
ರಾಹುಲ್ ಮಾತಿಗೆ ಪ್ರತಿಯಾಗಿ ಸ್ಮೃತಿ ಇರಾನಿ ಮಾತು ಆರಂಭಿಸುತ್ತಿದ್ದಂತೆ ಲೋಕಸಭೆಯಿಂದ ನಿರ್ಗಮಿಸಲು ಮುಂದಾದ ರಾಹುಲ್ ಗಾಂಧಿ, ಕೆಲವು ಫೈಲ್ ಗಳನ್ನು ಕೆಳಗೆ ಬೀಳಿಸಿಕೊಂಡರು. ಈ ವೇಳೆ ಅದನ್ನು ಎತ್ತಿಕೊಳ್ಳಲು ಮುಂದಾದಾಗ ಅಲ್ಲೇ ಕೂತಿದ್ದ ಬಿಜೆಪಿ ಸಂಸದರು, ರಾಹುಲ್ ಗಾಂಧಿ ನೋಡಿ ನಗಲು ಆರಂಭಿಸಿದ್ದರು. ಇದನ್ನು ಗಮನಿಸಿದ ರಾಹುಲ್ ಬಿಜೆಪಿಗರತ್ತ ಫ್ಲೈಯಿಂಗ್ ಕಿಸ್ ನೀಡಿ ಮುಂದೆ ನಡೆದರು ಎನ್ನಲಾಗಿದೆ.
ಈ ಯಾವ ದೃಶ್ಯಗಳು ಲೋಕಸಭೆಯಲ್ಲಿರುವ ಮುಖ್ಯ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಆದರೆ ಬಿಜೆಪಿ ಮಹಿಳಾ ಸಂಸದರು ರಾಹುಲ್ ಗಾಂಧಿ ನಡೆ ಅನುಚಿತವಾಗಿತ್ತು ಎಂದು ಆರೋಪಿಸಿದ್ದಾರೆ. ಇದು ಅಶ್ಲೀಲವಾಗಿದೆ, ಸ್ತ್ರೀದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಇಂತಹ ಉದಾಹರಣೆ ಹಿಂದೆಂದೂ ಕಂಡಿರಲಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ನಡೆ ಸಚಿವೆ ಶೋಭಾ ಕರಂದ್ಲಾಜೆ ಅವರು ಇದು ಅನುಚಿತ ವರ್ತನೆ ಎಂದು ಲೋಕಸಭೆ ಸ್ಪೀಕರ್ ಅವರಿಗೆ ದೂರು ನೀಡಿದ್ದಾರೆ.
ಭಾರತ್ ಜೋಡೊ 2.0
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಸಿ ಯಶಸ್ಸು ಕಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಮತ್ತೊಂದು ಬಾರಿ ಎರಡನೇ ಭಾರತ್ ಜೋಡೊ ಯಾತ್ರೆ ಕೈಗೊಳ್ಳಲಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಅವರ ಎರಡನೇ ಭಾರತ್ ಜೋಡೋ ಯಾತ್ರೆಯ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವು ಗುಜರಾತ್ನಿಂದ ಮೇಘಾಲಯದವರೆಗೆ ನಡೆಯಲಿದೆ ಎಂದು ಹೇಳಿದರು.