ಸುದ್ದಿಮೂಲ ವಾರ್ತೆ
ಕಲಬುರಗಿ, ಮಾ.31: ಎಸ್.ಸಿ ಒಳಮೀಸಲಾತಿ ರದ್ದುಪಡಿಸುವಂತೆ ಆಗ್ರಹಿಸಿ ಬಂಜಾರಾ ಸಮುದಾಯದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಒಳಮೀಸಲಾತಿ ಕುರಿತಾಗಿ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಶಿಫಾರಸ್ಸು ಮಾಡುತ್ತಿರುವುದನ್ನು ತಡೆ ಹಿಡಿಯಬೇಕೆಂದು ಆಗ್ರಹಿಸಿ, ನಗರದ ಬಂಜಾರಾ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಯಾವುದೇ ಕಾರಣಕ್ಕೂ ಒಳಮೀಸಲಾತಿ ಒಪ್ಪುವುದಿಲ್ಲ. ಅದಲ್ಲದೇ, ಒಳಮೀಸಲಾತಿಯೇ ಅಸಂವಿಧಾನಿಕವಾಗಿರುವಾಗ ಬಂಜಾರಾ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಶೇ. 4.5 ರಷ್ಟು ಮೀಸಲಾತಿ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಸಮುದಾಯಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಂಜಾರಾ ಶಕ್ತಿ ಪೀಠದ ಬಳಿರಾಮ ಮಹಾರಾಜ, ಮುಗಳನಾಗಾಂವದ ಜೇಮಸಿಂಗ್ ಮಹಾರಾಜ್, ಚೌಡಾಪೂರದ ಮುರಹರಿ ಮಹಾರಾಜರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇವಾಲಾಲ ಜಯಂತ್ಯುತ್ಸವ ಸಮಿತಿ ಶಾಮ ಪವಾರ, ಪ್ರಮುಖರಾದ ವಿನೋದ ಚವ್ಹಾಣ, ಚಂದು ಜಾಧವ, ಬಿ.ಬಿ.ನಾಯಕ ಸೇರಿದಂತೆ ನೂರಾರು ಜನ ಲಂಬಾಣಿ ಸಮುದಾಯದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.