ಸುದ್ದಿಮಾಲ ವಾರ್ತೆ
ಬೆಂಗಳೂರು: ಮೇ 1ರಂದು ದೇಶದಾದ್ಯಂತ ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಕಾರ್ಮಿಕರ ದಿನಾಚರಣೆಯಾಗಿ ಆಚರಿಸುವುದು ಕೇವಲ ಆಚರಣೆಗೆ ಮಾತ್ರವಲ್ಲದೆ ಕಾರ್ಮಿಕರ ಕೆಲಸವನ್ನು ಗೌರವಿಸುವುದು, ಅವರ ತ್ಯಾಗ ಬಲಿದಾನವನ್ನು ಗುರುತಿಸುವ ಸದುದ್ದೇಶದಿಂದ ಈ ದಿನವನ್ನು ಕಾರ್ಮಿಕರ ದಿನವನ್ನಾಗಿ ಆಚರಿಸುತ್ತಾರೆ.
ಇದು ಕೇವಲ ಭಾರತದಲ್ಲಿ ಮಾತ್ರವಲ್ಲದೇ ಅನೇಕ ವಿದೇಶದಲ್ಲಿಯು ಕೂಡ ಈ ದಿನವನ್ನು ಆಚರಿಸಲಾಗುತ್ತದೆ. ಆದರೆ ಮೇ 1 ರಂದು ಆಗಿರದೇ ಬೇರೆ ಬೇರೆ ದಿನಾಂಕದಂದು ಕಾರ್ಮಿಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ಇನ್ನೊಂದು ವಿಶೇಷವೆಂದರೆ ಮೇ 1ರಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಸಂಘಗಳು ಸಂಭ್ರಮದಿಂದ ಈ ದಿನವನ್ನು ಸಾರ್ವಜನಿಕ ಉತ್ಸವದ ದಿನವನ್ನಾಗಿ ಆಚರಣೆ ಮಾಡುತ್ತದೆ. ಜೊತೆಗೆ ಈ ದಿನದಂದು ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಗೌರವಿಸಲಾಗುತ್ತದೆ ಒಟ್ಟಾರೆ ಈ ಮೇ 1 ರಂದು ಕಾರ್ಮಿಕರಿಗಾಗಿಯೇ ಮೀಸಲಿಡಲಾಗಿದ್ದು ಕೆಲವು ದೇಶಗಳಲ್ಲಿ ಈ ದಿನವನ್ನು ಸಾರ್ವಜನಿಕ ರಜೆಯನ್ನಾಗಿ ಘೋಷಿಸಲಾಗಿದೆ.
ಕಾರ್ಮಿಕರ ದಿನವು ಮೊದಲು ಹುಟ್ಟಿಕೊಂಡಿದ್ದುಅಮೆರಿಕದಲ್ಲಿ. ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1,1886 ರಂದು ಪ್ರತಿಭಟನೆ ನಡೆಸಲು ಮುಂದಾಗಿದ್ದರು, ಕಾರಣ ದಿನದ 16 ಗಂಟೆಗಳ ಕಾಲ ಇದ್ದ ಕೆಲಸದ ಸಮಯದ ಮಿತಿಯನ್ನು 8 ಗಂಟೆಗಳ ಅವಧಿಗೆ ಮಿತಿಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆಯನ್ನುನಡೆಸಲಾಗಿತ್ತು.
ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ನಿಯಂತ್ರಿಸಲು ಪೊಲೀಸರು ಮೇ4 ರಂದು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅನೇಕ ಕಾರ್ಮಿಕರು ಸಾವನ್ನಪ್ಪಿದರು ಮತ್ತು ಕೆಲವರು ಗಾಯಗೊಂಡರು. ಈ ದಬ್ಬಾಳಿಕೆ ನೀತಿಯನ್ನು ಖಂಡಿಸಿ ಅಮೆರಿಕದ ಜನರು ಪ್ರತೀ ವರ್ಷ ಮೇ 1ರಂದು ಕಾರ್ಮಿಕ ದಿನವನ್ನಾಗಿ ಆಚರಿಸುವಂತೆ ಆಗ್ರಹಿಸಿದರು. ಇದರ ಫಲವಾಗಿ 1916 ರಲ್ಲಿ ಅಮೆರಿಕ ಸರ್ಕಾರ ಕೆಲಸದ ಕಾಲಮಿತಿಯನ್ನು 8 ಗಂಟೆಗಳ ಕಾಲ ಕೆಲಸ ಎಂದು ಆದೇಶ ನೀಡಿತು. ಜೊತೆಗೆ ಮೇ 1 ರಂದು ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲು ಘೋಷಿಸಿದರು.
ಅದೇ ರೀತಿ ಭಾರತದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಮೊದಲ ಬಾರಿಗೆ 1923 ಮೇ 1 ರಂದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ಸ್ಥಾಪನೆಗೊಂಡ ದಿನದಿಂದ ಆಚರಣೆ ಮಾಡಲಾಗಿತ್ತು. ಕಾರ್ಮಿಕರ ದಿನಾಚರಣೆಯಂದು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಮತ್ತು ಕಾರ್ಮಿಕರಿಗೆ ಆ ದಿನವನ್ನು ರಜೆಯಾಗಿ ಘೋಷಣೆ ಮಾಡಬೇಕೆಂದು ಸದನದಲ್ಲಿ ಮಸೂದೆ ಮಂಡಿಸಲಾಯಿತು. ಆದರಿಂದ ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಮತ್ತು ಎರಡನೇ ಮಹಾಯುದ್ಧದ ಬಳಿಕ ಈ ದಿನವನ್ನು ಜಗತ್ತಿನಾದ್ಯಂತ ಹೆಚ್ಚಾಗಿ ಆಚರಿಸಲು ಪ್ರಾರಂಭಿಸಲಾಗಿದೆ.