ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 23: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಂದುವರಿಯುತ್ತಾರೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ರಾಜ್ಯ ರಾಜಜಕೀಯದಲ್ಲಿ ಸಂಚಲನ ಮೂಡಿಸಿದೆ. ಡಿ.ಕೆ. ಶಿವಕುಮಾರ್ ಬಣ ಎಂಬಿ ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಮತ್ತೊಂದೆಡೆ ಈ ವಿಚಾರವಾಗಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಹೈಕಮಾಂಡ್ ಮತ್ತೊಮ್ಮೆ ಸಂದೇಶ ನೀಡಿದೆ.
ಮೈಸೂರಿನ ಸುತ್ತೂರು ಮಠಕ್ಕೆ ಸೋಮವಾರ ಭೇಟಿ ನೀಡಿದ್ದ ಎಂ.ಬಿ. ಪಾಟೀಲ್ ಅವರಿಗೆ ಅಧಿಕಾರ ಹಂಚಿಕೆಯ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ. ಅಧಿಕಾರ ಹಂಚಿಕೆಯ ಬಗ್ಗೆ ಪ್ರಸ್ತಾಪ ಆಗಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೇ ಹೇಳಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಮುಗಿಸಿದರೂ ಯಾವುದೇ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಹೇಳಿಕೆ ನೀಡಿದ್ದರು.
ಇದು ಡಿ.ಕೆ. ಶಿವಕುಮಾರ್ ಬಣದ ನಾಯಕರಲ್ಲಿ ಬೇಸರ ಮೂಡಿಸಿತ್ತು. ಅಧಿಕಾರ ಹಂಚಿಕೆ ಆಗಿದೆ ಎಂಬುದನ್ನು ಅವರು ಬಹಿರಂಗವಾಗಿ ಹೇಳದಿದ್ದರೂ ಸಹ ಎಂ.ಬಿ. ಪಾಟೀಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಮಂಗಳವಾರ ಮತ್ತೊಮ್ಮೆ ಪ್ರತಿಕ್ರಿಯಿಸದ ಎಂ.ಬಿ. ಪಾಟೀಲ್, ಅಧಿಕಾರ ಹಂಚಿಕೆ ಆಗಿಲ್ಲ ಎಂದು ನಾನು ಹೇಳಿದ್ದಲ್ಲ. ಮುಖ್ಯಮಂತ್ರಿ ಆಯ್ಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದನ್ನು ಕೆ.ಸಿ. ವೇಣುಗೋಪಾಲ್ ಅವರ ಬಳಿ ಕೇಳಿದಾಗ, ಅಂತಹ ಯಾವುದೇ ನಿರ್ಧಾರಗಳು ಆಗಿಲ್ಲ ಎಂದು ಹೇಳಿದ್ದರು. ಅದನ್ನೇ ನಾನು ಹೇಳಿದ್ದೇನೆ ಹೊರತು ಯಾರಿಗೋ ಮುಜುಗರ ಮಾಡುವುದಕ್ಕಾಗಿ ಹೇಳಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ. ಸುರೇಶ್, ಎಂ.ಬಿ. ಪಾಟೀಲ್ ಅವರಿಗೆ ನಾನು ಈಗ ಉತ್ತರ ಕೊಡಬಲ್ಲೆ ಆದರೆ, ಈಗ ಅದರ ಅವಶ್ಯಕತೆ ಇಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದರೆ ಸುರ್ಜೇವಾಲ ಅವರನ್ನೇ ಕೇಳಿ ಎಂದು ಹೇಳಿದ್ದಾರೆ.
ಎಂ.ಬಿ. ಪಾಟೀಲ್ ಹೇಳಿಕೆ ವಿವಿಧ ಆಯಾಮಗಳನ್ನು ಪಡೆಯುತ್ತಿದ್ದಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ‘ಯಾರೂ ಕೂಡ ಅನಗತ್ಯ ಹೇಳಿಕೆಗಳನ್ನು ನೀಡಿ ಗೊಂದಲ ಉಂಟು ಮಾಡಬಾರದು. ಕರ್ನಾಕಟದ ಜನ ಪೂರ್ಣ ಬಹುಮತ ನೀಡಿದ್ದು, ಅವರಿಗೆ ಒಳ್ಳೆಯ ಆಡಳಿತ ನೀಡುವುದರ ಕಡೆ ಗಮನ ಕೊಡಬೇಕು. ಯಾರೂ ಅನಗತ್ಯ ಹೇಳಿಕೆ ನೀಡಬಾರದು,’ ಎಂದು ಸೂಚನೆ ನೀಡಿದ್ದಾರೆ.
ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ಸುರ್ಜೇವಾಲ ಇದ್ದಾರೆ, ಕೆ.ಸಿ. ವೇಣುಗೋಪಾಲ್ ಇದ್ದಾರೆ, ಸಿಎಂ ಇದ್ದಾರೆ.
– ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
ಎಂ.ಬಿ. ಪಾಟೀಲ್ ಅವರು ಯಾಕೆ ಮಾತನಾಡಿದ್ದಾರೆ, ಅವರಿಗೆ ಏನು ಮಾಹಿತಿ ಇದೆ ಎಂಬುದು ನನಗೆ ಗೊತ್ತಿಲ್ಲ. ಈ ಸಂದರ್ಭದಲ್ಲಿಅನಗತ್ಯ ಗೊಂದಲ ಬೇಡ.
– ಪ್ರಿಯಾಂಕ್ ಖರ್ಗೆ, ಸಚಿವ
ನಾನು ಅಧಿಕಾರ ಹಂಚಿಕೆಯ ವಿಚಾರ ಮಾತನಾಡುವಷ್ಟ ಸ್ಟ್ರಾಂಗ್ ಅಲ್ಲ. ಅದೆಲ್ಲವನ್ನೂ ಹೈಕಮಾಂಡ್ ನೋಡಕೊಳ್ಳುತ್ತದೆ.
– ಕೆ. ಶಿವಲಿಂಗೇಗೌಡ, ಶಾಸಕ
ಅಧಿಕಾರ ಹಂಚಿಕೆಯ ವಿಚಾರ ಈಗ ಅಪ್ರಸ್ತುತ. ರಾಜ್ಯದಲ್ಲಿ ಪೂರ್ಣ ಬಹುಮತದ ಕಾಂಗ್ರೆಸ್ ಸರ್ಕಾರ ಬಂದಿದೆ. ಜನರಿಗೆ ಉತ್ತಮ ಆಡಳಿತ ನೀಡುವುದರ ಬಗ್ಗೆ ಅಷ್ಟೇ ನಮ್ಮ ಗಮನ ಇದೆ.
– ಡಾ. ಅಜಯ್ ಸಿಂಗ್, ಶಾಸಕ