ಸುದ್ದಿಮೂಲ ವಾರ್ತೆ
ಮೈಸೂರು,ಜೂ.21: ನಾಡಪ್ರಭು ಕೆಂಪೇಗೌಡ ಅವರ 514 ನೇ ಜಯಂತಿಯನ್ನು ಎಲ್ಲಾ ವರ್ಗದವರು ಜೊತೆಗೂಡಿ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಕಲಾ ಮಂದಿರದಲ್ಲಿ ಜೂನ್ 27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲಾಗುವುದು.
ಅಂದು ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಅವರದಿಂದ ಬೆಳಗ್ಗೆ 10 ಗಂಟೆಗೆ ಆರಂಭಗೊಂಡು ಕಲಾ ಮಂದಿರದವರೆಗೂ ಮೆರವಣಿಗೆ ಸಾಗಲಿದೆ. ಬಳಿಕ ಕಲಾ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ. ಸುದರ್ಶನ್, ಮೆರವಣಿಗೆ ಹಾಗೂ ಕಾರ್ಯಕ್ರಮದ ಸ್ಥಳದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಮಾಡಲಾಗುವುದು. ಕಾರ್ಯಕ್ರಮ ಆಯೋಜನೆಗೆ ಸರ್ಕಾರದಿಂದ 50 ಸಾವಿರ ಅನುದಾನವಿದ್ದು ಸರ್ಕಾರದ ನಿಯಮಾವಳಿಗಳ ಅನ್ವಯ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಂಡಿಕೆರೆ ಗೋಪಾಲ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ಕನ್ನಡ ಚಳುವಳಿ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಮುದಾಯಗಳ ಮುಖಂಡರು ಇದ್ದರು.