ಸುದ್ದಿಮೂಲವಾರ್ತೆ
ಕೊಪ್ಪಳ ಜುಲೈ 13: ಮಳೆಯಿಂದಾಗುವ ಹಾನಿಗೆ ಕಾಲಮಿತಿಯೊಳಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ವಹಿಸಬೇಕು. ಮಳೆ ಕೊರತೆಯಾದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಯತ್ತ ಗಮನ ಹರಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ ಅವರು ಮಾತನಾಡಿ, ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಮೊದಲು ಪರೀಕ್ಷಿಸಿಯೇ ನೀರು ಪೂರೈಸಬೇಕು. ಕುಡಿಯುವ ನೀರಿನ ಬೊರವೆಲ್ ಹಾಗೂ ಟ್ಯಾಂಕರ್ ಸೇರಿದಂತೆ ಯಾವುದೇ ಬಗೆಯ ನೀರಿನ ಮೂಲಗಳನ್ನು ಸಹ ಕಾಲಕಾಲಕ್ಕೆ ಪರೀಕ್ಷಿಸಬೇಕು ಎಂದು ಸೂಚನೆ ನೀಡಿದರು.
ಮಳೆಗಾಲ ಹಿನ್ನಲೆಯಲ್ಲಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಮಿಕ ಕಾಯಿಲೆಗಳು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಡೆಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಲು ನೀರು ಸಂಗ್ರಹಣೆಗೊಂಡು ಸೊಳ್ಳೆ ಉತ್ಪತ್ತಿಯಾಗದ ಹಾಗೆ ಎಲ್ಲಾ ಕಡೆಗಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಳೆಗಾಲ ಹಿನ್ನೆಲೆಯಲ್ಲಿ ಕಾಯಿಸಿ ಆರಿಸಿದ ನೀರನ್ನು ಕುಡಿಯಲು, ಮನೆ ಸುತ್ತಲು ನೀರು ನಿಲ್ಲದಂತೆ ಶುಚಿತ್ವ ಕಾಯ್ದುಕೊಳ್ಳಲು, ಬಿಸಿ ಆಹಾರ ಸೇವೆನೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಏಪ್ರಿಲ್ನಿಂದ ಜೂನ್ ತಿಂಗಳವರೆಗೆ ಕೊಪ್ಪಳ ತಾಲೂಕಿನಲ್ಲಿ 12, ಕುಷ್ಟಗಿ ತಾಲೂಕಿನಲ್ಲಿ 10, ಕುಕನೂರ ತಾಲೂಕಿನಲ್ಲಿ 9 ಹಾಗು ಯಲಬುರ್ಗಾ ತಾಲೂಕಿನಲ್ಲಿ 24 ಮತ್ತು ಗಂಗಾವತಿ ತಾಲೂಕಿನಲ್ಲಿ 5 ಸೇರಿ ಒಟ್ಟು ಒಟ್ಟು 60 ಮನೆಹಾನಿ ಪ್ರಕರಣಗಳಿಗೆ ಪೂರ್ಣಪ್ರಮಾಣದಲ್ಲಿ ಪರಿಹಾರ ವಿತರಿಸಲಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಏಪ್ರಿಲ್ದಿಂದ ಇಲ್ಲಿಯವರೆಗೆ ಕೊಪ್ಪಳ ತಾಲೂಕಿನಲ್ಲಿ 16, ಕುಷ್ಟಗಿ ತಾಲೂಕಿನಲ್ಲಿ 12, ಕನಕಗಿರಿ ತಾಲೂಕಿನಲ್ಲಿ 1, ಕಾರಟಗಿ ತಾಲೂಕಿನಲ್ಲಿ 3, ಕೂಕನೂರ ತಾಲೂಕಿನಲ್ಲಿ 4 ಮತ್ತು ಯಲಬುರ್ಗಾ ತಾಲೂಕಿನಲ್ಲಿ 5 ಸೇರಿ ಒಟ್ಟು 41 ಜಾನುವಾರುಗಳು ಸಾವಿಗೀಡಾಗಿದ್ದು, ಈ ಪೈಕಿ 38 ಜಾನುವಾರಗಳ ಪರಿಹಾರ ಮೊತ್ತವನ್ನು ಸಂಬಂಧಪಟ್ಟ ಸಂತ್ರಸ್ಥರಿಗೆ ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಸಭೆಗೆ ಮಾಹಿತಿ ನೀಡಿದರು.
ಜುಲೈ 1 ರಿಂದ ಜುಲೈ 12ರವರೆಗೆ ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆ 18 ಮಿಮಿ ಇದ್ದು, ವಾಸ್ತವಿಕವಾಗಿ 41 ಮಿಮಿ ಸುರಿದು ಶೇ.130ರಷ್ಟು, ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 17 ಮಿಮಿ ಇದ್ದು ವಾಸ್ತವಿಕವಾಗಿ 36 ಮಿಮಿ ಸುರಿದು ಶೇ.104ರಷ್ಟು, ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ 14 ಮಿಮಿ ಇದ್ದು, ವಾಸ್ತವಿಕವಾಗಿ 40 ಮಿಮಿ ಮಳೆ ಸುರಿದು ಶೇ.195ರಷ್ಟು, ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ 18 ಮಿಮಿ ಇದ್ದು ವಾಸ್ತವಿಕವಾಗಿ 34 ಮಿಮಿ ಸುರಿದು ಶೇ.90ರಷ್ಟು, ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 16 ಮಿಮಿ ಇದ್ದು ವಾಸ್ತವಿಕವಾಗಿ 16 ಮಿಮಿ ಮಳೆ ಸುರಿದು ಶೇ.2ರಷ್ಟು, ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ 17 ಮಿಮಿ ಇದ್ದು, ವಾಸ್ತವಿಕವಾಗಿ 42 ಮಿಮಿ ಮಳೆ ಸುರಿದು ಶೇ.151ರಷ್ಟು, ಕುಕನೂರ ತಾಲೂಕಿನಲ್ಲಿ ವಾಡಿಕೆ ಮಳೆ 16 ಮಿಮಿ ಇದ್ದು ವಾಸ್ತವಿಕವಾಗಿ 40 ಮಿಮಿ ಮಳೆ ಸುರಿದು ಶೇ.154ರಷ್ಟು ಮಳೆ ಸುರಿದಿದೆ. ಒಟ್ಟಾರೆ ಜಿಲ್ಲೆಯಲ್ಲಿ ವಾಡಿಕೆ ಮಳೆ 18 ಮಿಮಿ ಇದ್ದು ವಾಸ್ತವಿಕವಾಗಿ 33 ಮಿಮಿ ಸುರಿದು ಶೇ.84ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ ಕೆ.ವಿ., ವಿವಿಧ ತಾಲೂಕುಗಳ ತಹಶೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಪಾಲನಾ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.