ಸುದ್ದಿಮೂಲ ವಾರ್ತೆ
ದೇವನಹಳ್ಳಿ , ಆ.27: ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗಿದ್ದು ನಿರಂತರವಾಗಿ ಯೋಗವನ್ನು ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಸಾಧ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಯೋಗಾ ಸ್ಪರ್ಧೆಗೆ ಆಯ್ಕೆಯಾಗಿರುವ 5 ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ತಲಾ 1 ಲಕ್ಷ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.
ಪಟ್ಟಣದ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ದೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಗ ಮಾಡುವುದರಿಂದ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದಾಗಿದೆ ದಿನನಿತ್ಯ ಎಲ್ಲರೂ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವಂತ ರಾಜ್ಯ ಮತ್ತು ರಾಷ್ಟ್ರವನ್ನು ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದು ಹೇಳಿದರು.
ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರ ರಾಷ್ಟೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ವಿಜೇತರಾಗಿ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಬೇಕು. ಇಂದು ನಡೆದ ಯೋಗಾ ಸ್ಪರ್ದೆಯಲ್ಲಿ ಅತ್ಯುತ್ತಮವಾಗಿ ಪ್ರದರ್ಶಿಸಿದ್ದಾರೆ. ನಾನು ಹಿಂದೆಂದೂ ಇಂತಹ ಯೋಗಬ್ಯಾಸದ ಮೂಲಕ ಭರತ ನಾಟ್ಯವನ್ನು ಕಂಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಜಿಲ್ಲಾಧ್ಯಕ್ಷ ಎಸ್.ಮಾರುತಿ ಮಾತನಾಡಿ ನೈಸರ್ಗಿಕವಾಗಿ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ನಿರಂತರ ಯೋಗಾಭ್ಯಾಸದಿಂದ ಮಾತ್ರ ಸಾಧ್ಯ, ಹಾಗಾಗಿ ಸ್ವಯಂ ಆರೋಗ್ಯ ಕಾಪಾಡಿಕೊಳ್ಳಲು ಯೋಗದಿಂದ ಸಾಧ್ಯ, ಯೋಗ ಪ್ರತಿನಿತ್ಯ ಬೆಳಿಗ್ಗೆ ಅರ್ದ ತಾಸು, ಯೋಗ ಮಾಡುವ ಮೂಲಕ ಆರೋಗ್ಯ ಸಮತೋಲನದಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಯಾಣ ವೆಚ್ಚ ಸಹಕಾರ:
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅಂತರರಾಷ್ಟೀಯ ಯೋಗಾಸ್ಪರ್ದೆಗೆ ಬೆಂಗಳೂರು ವಿಭಾಗದಿಂದ ಭಾಗವಹಿಸುತ್ತಿರುವ ಮೊಹಮದ್ ಪಿರೋಜ್ ಶೇಕ್ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದಾಗಿ ತಿಳಿಸಿದ್ದಾರೆ ಹಾಗಾಗಿ ಅವರು ಸ್ಪರ್ದೆಗೆ ತೆರಳಿ ವಾಪಸ್ ಬರಲು ತಗಲುವ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಎಸ್.ಮಾರುತಿ ತಿಳಿಸಿದ್ದಾರೆ.
ಇದೆ ವೇಳೆ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಚಾರ್ಯ ನಿರಂಜನಮೂರ್ತಿ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಎಸ್.ನಾಗೇಗೌಡ, ಪುರಸಭೆ ಉಪಾಧ್ಯಕ್ಷ ಗೀತಾಶ್ರೀಧರ್ಮೂರ್ತಿ, ಸದಸ್ಯ ಬಾಂಬೇ ನಾರಾಯಣಸ್ವಾಮಿ, ಅಣ್ಣೇಶ್ವರ ಗ್ರಾಪಂ ಉಪಾಧ್ಯಕ್ಷ ಮುನಿರಾಜಪ್ಪ, ಮುಖಂಡರಾದ ಚೌಡಪನಹಳ್ಳಿ ಲೊಕೇಶ್, ರಾಮಚಂದ್ರಪ್ಪ, ಶಿವಾಜಿಗೌಡ, ಬಿ.ವಿ.ಸ್ವಾಮಿ, ಮಹಿಳಾ ಘಟಕದ ಪದಾಧಿಕಾರಿಗಳಾದ ಅನಂತಕುಮಾರಿ ಚಿನ್ನಪ್ಪ, ಶಶಿಕಲಾ, ಮಾಧವಿ,ರಾಧ, ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಇದ್ದರು.