ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.6: ದಿನನಿತ್ಯ ಮೆಟ್ರೋದಲ್ಲಿ ಪ್ರಯಾಣ ಮಾಡುವವರು ಹಾಗೂ ಬೇರೆ ಊರುಗಳಿಂದ ಮೆಜೆಸ್ಟಿಕ್ ಗೆ ಬಂದಿಳಿದು, ಅಲ್ಲಿಂದ ಮೆಟ್ರೋದಲ್ಲಿ ತಮ್ಮ ಸ್ಥಳಗಳಿಗೆ ತಲುಪಬೇಕಾದವರಿಗೆ ಇನ್ಮುಂದೆ ಸುಲಭವಾಗಿ ಆಟೋ ಸಿಗಲಿದೆ.
ಹೌದು. ಅದೇ “ಮೆಟ್ರೋ ಮಿತ್ರ” ನಿಮ್ಮ ಸಮಸ್ಯೆಗಳಿಗೆ ಮೆಟ್ರೋ ಮಿತ್ರ ಪರಿಹಾರ ನೀಡಲಿದೆ. ಮೆಟ್ರೋ ನಿಲ್ದಾಣದ ಬಳಿ ಇಳಿದಾಗ ನೀವು ಈ ಮೆಟ್ರೋ ಮಿತ್ರ ಆಪ್ ಮೂಲಕ ಆಟೋ ಬುಕ್ ಮಾಡಬಹುದು. ನಂತರ ನೀವು ಸುಲಭವಾಗಿ ನಿಮ್ಮ ಸ್ಥಳವನ್ನು ತಲುಪಬಹುದು.
ಈಗಾಗಲೇ ಜಾರಿಯಲ್ಲಿರುವ ನಮ್ಮ ಯಾತ್ರಿ ಅಪ್ಲಿಕೇಶನ್ ಯಶಸ್ಸಿನ ನಂತರ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಜೊತೆಗೆ ಆಟೋ ಚಾಲಕರ ಸಂಘದವರು ಮೆಟ್ರೋ ಮಿತ್ರ ಆಪ್ ಅನ್ನು ಆರಂಭಿಸಿದ್ದಾರೆ. ಈ ಆಪ್ ನಾಳೆಯಿಂದ ಅಂದರೆ ಸೆಪ್ಟೆಂಬರ್ 6 ರಿಂದ ಕಾರ್ಯಾರಂಭ ಮಾಡಲಿದೆ.
ಈ ಅಪ್ಲಿಕೇಶನ್ ಅಂದರೆ ಆಪ್ ವಿಭಿನ್ನವಾಗಿದ್ದು, ಮೆಟ್ರೋ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಬೆಂಗಳೂರಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಅನ್ನು ಹೊರಗೆ ಹಾಕಲಾಗಿರುತ್ತದೆ. ಅದನ್ನು ಸ್ಕ್ಯಾನ್ ಮಾಡಿ ಆಟೋ ಬುಕ್ ಮಾಡಿಕೊಳ್ಳಬಹುದು. ಸರ್ಕಾರ ನಿಗದಿಪಡಿಸಿರುವ ದರಗಳನ್ನೇ ಈ ಆಟೋ ಚಾಲಕರು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಹೀಗಾಗಿ ಪ್ರಯಾಣಿಕರು ಆಟೋ ದರದ ಬಗ್ಗೆ ಆತಂಕ ಪಡುವ ಅಗತ್ಯವಿರುವುದಿಲ್ಲ.
ಮೆಟ್ರೋ ನಿಲ್ದಾಣಗಳ ಹೊರಗೆ ಪ್ರದರ್ಶಿಸಲಾಗಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಆಟೋ ಬರಲಿದೆ. ಆಟೋ ಚಾಲಕರು ಆಪ್ ಅನ್ನು ಹೊಂದಿದ್ದು, ಅವರಿಗೆ ನೋಟಿಫಿಕೇಶನ್ ತಲುಪಲಿದೆ ನಂತರ ನೀವು ಒನ್ ಟೈಮ್ ಪಾಸ್ವರ್ಡ್ ಬಳಸಿ ಪ್ರಯಾಣ ಮಾಡಬಹುದು.