ಸುದ್ದಿಮೂಲ ವಾರ್ತೆ
ತುಮಕೂರು, ಆ.8: ರಾಜ್ಯದ ತೋಟಗಾರಿಕಾ ಕ್ಷೇತ್ರಕ್ಕೆ ಎಂ.ಹೆಚ್.ಮರಿಗೌಡರ ಕೊಡುಗೆ ಅಪಾರ. ರಾಜ್ಯದ 19 ಜಿಲ್ಲೆಗಳಲ್ಲಿ 357 ಫಾರಂಗಳನ್ನು ತೆರೆದು ತೋಟಗಾರಿಕೆಗೆ ಉತ್ತೇಜನ ನೀಡಿದ್ದರು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ತುಮಕೂರು ತಾಲೂಕು ಸಿರಿವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ ಹಾಗೂ ತೋಟಗಾರಿಕಾ ಭೀಷ್ಮ ಡಾ.ಎಂ.ಹೆಚ್.ಮರಿಗೌಡ ಜನ್ಮಜಯಂತಿ ಕಾರ್ಯಕ್ರಮಕ್ಕೆ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಕೃಷಿ, ತೋಟಗಾರಿಕಾ ಬೆಳೆಗಳು, ಪರಿಸರದ ಜೊತೆಗೆ ಕೃಷಿ ಇಲಾಖೆಯಿಂದ ತೋಟಗಾರಿಕೆಯನ್ನು ವಿಭಾಗಿಸಿ, ಪ್ರತ್ಯೇಕ ಇಲಾಖೆಯನ್ನಾಗಿಸಿ, ತೋಟಗಾರಿಕೆ ಬೆಳೆಗಳಿಗೆ ಬಗ್ಗೆ ಒತ್ತು ನೀಡಿದರು. ಬೆಂಗಳೂರು, ಕೋಲಾರ, ತುಮಕೂರಿನಲ್ಲಿ ಹುಣಸೆ, ಹಲಸು, ಮಾವು ಬೆಳೆಯುವ ಮೂಲಕ ಬಂಜರು ಭೂಮಿಯನ್ನು ತೋಟವಾಗಿ ಪರಿವರ್ತಿಸಿ, ರೈತನನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಿದರು ಎಂದು ತಿಳಿಸಿದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಬಿ.ಸಿ.ಶಾರದಮ್ಮ ಮಾತನಾಡಿ, ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ, ಕೃಷಿಗೆ ಪರ್ಯಾಯವಾಗಿ ತೋಟಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ರೈತರಿಗೆ ಶಾಶ್ವತ ಆದಾಯ ಬರುವಂತೆ ಡಾ.ಎಂ.ಹೆಚ್.ಮರಿಗೌಡ ಅವರು ಮಾಡಿದರು.
ಮಕ್ಕಳಿಗೆ ತೋಟಗಾರಿಕೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಿರಿವರ ಹೈಸ್ಕೂಲ್ನ ಮಕ್ಕಳಿಗೆ ಚಿತ್ರಸ್ಪರ್ಧೆ, ಪ್ರಬಂಧ, ಆಶುಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ರಚಿಸಿದ್ದ ಚಿತ್ರಗಳನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.