ಸುದ್ದಿಮೂಲ ವಾರ್ತೆ
ಮೈಸೂರು, ಸೆ.15: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಿನ್ನಲೆಯಲ್ಲಿ ಭಾರತದ ಆತ್ಮವೆಂದೇ ಪರಿಗಣಿಸಲ್ಪಟ್ಟಿರುವ ಸಂವಿಧಾನದ ಪೀಠಿಕೆಯನ್ನು ಮೈಸೂರಿನಲ್ಲಿ ಲಕ್ಷಾಂತರ ಮಕ್ಕಳು ಪಠಿಸಿದರು. ಶುಕ್ರವಾರ ಮೈಸೂರು ವಿಶ್ವವಿದ್ಯಾಲಯದ ಓವಲ್ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ನಡೆದ ಬೃಹತ್ ಸಮಾರಂಭದಲ್ಲಿ ಸಂವಿಧಾನ ಪೀಠಿಕೆಯಾನ್ನು ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಬೋಧಿಸಿದರು.
ಬಳಿಕ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು .ಇಡೀ ರಾಜ್ಯದಲ್ಲಿ ಒಟ್ಟು ನೋಂದಾವಣಿಯಲ್ಲಿ ಬೆಂಗಳೂರು ನಗರದ ನಂತರ ಮೈಸೂರು ಎರಡನೇ ಸ್ಥಾನ ಪಡೆದಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 23,35,568 ಮಕ್ಕಳು ನೋಂದಣೆ ಆಗಿದ್ದರೆ, ಮೈಸೂರಲ್ಲಿ 18, 14,824 ಮಕ್ಕಳು ನೋಂದಣೆ ಆಗಿದ್ದರು.
ಶಾಸಕ ಕೆ. ಹರೀಶ್ಗೌಡ ಮಾತನಾಡಿ, ಸoವಿಧಾನ ಉಳಿದರೆ ಮಾತ್ರ ಪ್ರತಿಯೊಬ್ಬರೂ ಕೂಡ ಸಮಾನತೆಯಿಂದ ಬದುಕಲು ಸಾಧ್ಯ. ಸಂವಿಧಾನವಿಲ್ಲದಿದ್ದರೆ ಪ್ರತಿಯೊಬ್ಬರೂ ಕೂಡ ಅನಾಗರಿಕರಾಗಬಹುದಾದ ಸಂಭವವಿದೆ. ಸಂವಿಧಾನದಿoದ ಬಡವ ಶ್ರೀಮಂತ ಎಂಬ ಭೇದ-ಭಾವವಿಲ್ಲದೆ ನಾವೆಲ್ಲರೂ ಬದುಕುತ್ತಿದ್ದೇವೆ ಎಂದು ಹೇಳಿದರು.
ಸಮಾನತೆಯ ಜೀವನಕ್ಕೆ ಸಂವಿಧಾನ ಅಡಿಪಾಯ. ಸಂವಿಧಾನವನ್ನು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮ ಸಮಾಜದ ನಿರ್ಮಾಣ ಮಾಡುವುದರ ಜೊತೆಗೆ ಸಮಾನತೆಯಿಂದ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಸಂವಿಧಾನದ ಪೀಠಿಕೆಯಯನ್ನು ನಾವೆಲ್ಲರೂ ಕೂಡ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಂಗಾಮಿ ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ ರೂಪ, ಜಿಪಂ ಸಿಇಓ ಕೆ. ಎಂ ಗಾಯಿತ್ರಿ, ಮಹಾನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್, ನಾಗರಿಕ ಮತ್ತು ಜಾರಿ ನಿರ್ದೇಶನಾಲಯದ ಪೊಲೀಸ್ ಆಧೀಕ್ಷಕಿ ಕವಿತಾ, ಅಪರ ಜಿಲ್ಲಾಧಿಕಾರಿ ಪಿ ಶಿವರಾಜ್, ಮಾಜಿ ಮೇಯರ್ ಪುರಷೋತ್ತಮ್, ಪ್ರವಾಸೋಸ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಉಪ ವಿಭಾಗಧಿಕಾರಿ ರಕ್ಷಿತ್. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕುಮಾರಸ್ವಾಮಿ ಮತ್ತು ವಿವಿಧ ಕಾಲೇಜಿ ವಿದ್ಯಾರ್ಥಿಗಳು, ದಲಿತ ಒಕ್ಕೂಟಗಳ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.