ಸುದ್ದಿಮೂಲ ವಾರ್ತೆ
ಬೆಂಗಳೂರು,ನ.5: ಸಿಲಿಕಾನ್ ಸಿಟಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಪ್ರತಿಮಾ ಅವರ ಬರ್ಬರ ಹತ್ಯೆ ನಡೆದಿದೆ. ಇದು ಬೆಂಗಳೂರಿನ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಚಾಕುವಿನಿಂದ ಕತ್ತು ಸೀಳಿ ಕೊಲೆಗಡುಕರು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಹತ್ಯೆಯಾಗಿರುವ ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ 37 ವರ್ಷದ ಪ್ರತಿಮಾ ಅವರು ತಮ್ಮ ಪತಿಯೊಂದಿಗೆ ವಿಚ್ಛೇದನ ಪಡೆದಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ಒಂಟಿಯಾಗಿ ವಾಸವಿದ್ದರು. ಆದರೆ ಅಧಿಕಾರಿಯ ಹತ್ಯೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ.
ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರ ಕುವೆಂಪು ನಗರದ ಗೋಕುಲ್ ಅಪಾರ್ಟ್ಮೆಂಟ್ ಬಳಿಯ ಬಾಡಿಗೆ ಮನೆಯಲ್ಲಿ ಒಂಟಿಯಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಹತ್ಯೆಗೀಡಾಗಿದ್ದಾರೆ. ಈ ಘಟನೆಯ ಹಿಂದೆ ಹತ್ತು ಹಲವು ಅನುಮಾನಗಳು ವ್ಯಕ್ತವಾಗಿದ್ದು, ಗಣಿ ದಂಧೆ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಬಿರುಸುಗೊಳಿಸಿದ್ದಾರೆ.
ಸರ್ಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದ ಅಧಿಕಾರಿ ಪ್ರತಿಮಾ ಮನೆಗೆ ನಿನ್ನೆ ರಾತ್ರಿ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೆಲಸ ಮುಗಿಸಿ ಕಾರಿನಲ್ಲಿ ಚಾಲಕ ಬಿಟ್ಟು ಹೋದ ಬಳಿಕ ರಾತ್ರಿ 8.30ರ ಸುಮಾರಿಗೆ ಈ ಕೊಲೆ ನಡೆದಿದೆ. ಪ್ರತಿಮಾಳಿಗೆ ರಾತ್ರಿ ಅವರ ಸಹೋದರ ಪ್ರತೀಶ್ ಕರೆ ಮಾಡಿದ್ದಾರೆ. ಆದರೆ ಕರೆಯನ್ನು ಸ್ವೀಕರಿಸಲಿಲ್ಲ. ಇದರಿಂದ ಗಾಬರಿಗೊಂಡ ಸಹೋದರ ಇಂದು ಮುಂಜಾನೆ ಮನೆಗೆ ಬಂದು ನೋಡಿದಾಗ ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಆಘಾತಕ್ಕೊಳಗಾದರು.
ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ. ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೂ ಮೊದಲು ಪ್ರತಿಮಾ ರಾಮನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಳೆದ ಎಂಟು ವರ್ಷಗಳಿಂದ ದೊಡ್ಡಕಲ್ಲಸಂದ್ರದಲ್ಲಿ ಪ್ರತಿಮಾ ಒಬ್ಬರೇ ವಾಸವಾಗಿದ್ದರು. ರಾತ್ರಿ 8 ಗಂಟೆಗೆ ಕಚೇರಿ ಕೆಲಸವನ್ನು ಮುಗಿಸಿ ಪ್ರತಿಮಾರನ್ನು ಚಾಲಕ ಸರ್ಕಾರಿ ಕಾರಿನಲ್ಲೇ ಮನೆಗೆ ಬಿಟ್ಟು ತೆರಳಿದ್ದ ಎನ್ನಲಾಗಿದೆ. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಪ್ರತಿಮಾ ಕೊಲೆಯಾಗಿದ್ದಾರೆ.
ತೀರ್ಥಹಳ್ಳಿಯ ತುಡುಕಿ ಗ್ರಾಮದ ಸತ್ಯನಾರಾಯಣ ಅವರನ್ನು ಕಳೆದ 18 ವರ್ಷಗಳ ಹಿಂದೆ ಪ್ರತಿಮಾ ವಿವಾಹವಾಗಿದ್ದರು. ಮದುವೆಯಾದ ಸ್ವಲ್ಪ ದಿನಗಳಲ್ಲೇ ಪ್ರತಿಮಾಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ನೌಕರಿ ಸಿಕ್ಕಿತು. ಪ್ರತಿಮಾ ಅವರಿಗೆ ಒಬ್ಬ ಪುತ್ರ ಇದ್ದಾನೆ. ಪತಿಯೊಂದಿಗೆ ವಿಚ್ಛೇಧನ ಪಡೆದಿದ್ದ ಪ್ರತಿಮಾ ಆಗಾತ ತೀರ್ಥಹಳ್ಳಿಗೆ ತೆರಳಿ ಪುತ್ರನನ್ನು ನೋಡಕೊಂಡು ಬರುತ್ತಿದ್ದರು. ಇತ್ತೀಚೆಗೆ ತೀರ್ಥಗಳ್ಳಿ ತಾಲ್ಲೂಕಿನ ತುಡಕಿಯಲ್ಲಿ ಸತ್ಯನಾರಾಯಣ ಹೊಸ ಮನೆ ಕಟ್ಟಿಸಿದ್ದು ಅದರ ಗೃಹ ಪ್ರವೇಶಕ್ಕೂ ಪ್ರತಿಮಾ ಹೋಗಿ ಬಂದಿದ್ದರು.
ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಪ್ರತಿಮಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರತಿಮಾ ಸಹೋದರ ಪ್ರತೀಶ್ ಬನ್ನೇರುಘಟ್ಟ ಸಮೀಪದಲ್ಲೇ ವಾಸವಾಗಿದ್ದು, ಬಿಬಿಎಂಪಿಯಲ್ಲಿ ಗುತ್ತಿಗೆದಾರನಾಗಿದ್ದಾರೆ.
ಪ್ರತೀಶ್ ರಾತ್ರಿ ಪ್ರತಿಮಾಳಿಗೆ ಕಾಲ್ ಮಾಡಿದ್ದು,ಕಾಲ್ ರಿಸೀವ್ ಮಾಡದಿದ್ದಾಗ, ಕೆಲಸದಿಂದ ಸುಸ್ತಾಗಿರಬಹುದು ಎಂದು ಸುಮ್ಮನಾಗಿದ್ದಾರೆ. ಮತ್ತೆ ಬೆಳಗ್ಗೆ ಪೋನ್ ಮಾಡಿದಾಗ ಸ್ವಿಚ್ ಆಫ್ ಎಂದು ಬಂದಿದೆ. ಹೀಗಾಗಿ ಕೆಳಗಡೆ ವಾಸವಿದ್ದ ಮನೆಯವರಿಗೆ ವಿಚಾರಿಸಲು ತಿಳಿಸಿದ್ದಾರೆ. ಬಾಡಿಗೆ ಮನೆಯವರು ಕಿಟಕಿ ಮೂಲಕ ನೋಡಿದಾಗ ಹತ್ಯೆಯಾಗಿರುವುದು ತಿಳಿದು ಬಂದಿದೆ. ಮುಖ್ಯ ಬಾಗಿಲು ಕೂಡ ತೆರದಿದ್ದ ಕಾರಣಕ್ಕೆ ಕೂಡಲೇ ಸಹೋದರನಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಪಾರ್ಟ್ಮೆಂಟ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಕಿಮ್ಸ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದೆ.
ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಎಲ್ಲಾ ಆಯಾಮಗಳಲ್ಲಿ ಕೈಗೊಂಡಿದ್ದಾರೆ.