ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.23: ವಿಶ್ವವೇ ನಿಬ್ಬೆರಗಾಗುವಂತಹ ಚಂದ್ರಯಾನ- 3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿರುವುದನ್ನು ಬೆಂಗಳೂರಿನ ನೆಹರು ತಾರಾಲಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಸೇರಿದಂತೆ ಸಾವಿರಾರು ಜನ ಸಾಕ್ಷೀಕರಿಸಿದರು.
ತಾರಾಲಯದ ಹೊರಾಂಗಣದಲ್ಲಿ ಎಲ್ಸಿಡಿ ಪರದೆಯ ಮೇಲೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವ ಕ್ಷಣ ಕ್ಷಣದ ಮಾಹಿತಿಯನ್ನು ದೃಶ್ಯ ಹಾಗೂ ಶ್ರವ್ಯದ ಮೂಲಕ ಸಾರ್ವಜನಿಕರಿಗೆ ತಿಳಿಸಲು ನೆಹರು ತಾರಾಲಯದ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು. ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ನೇರ ಪ್ರಸಾರವನ್ನು ಹಾಗೂ ಚಂದ್ರನ ಛಾಯಾಚಿತ್ರಗಳ ಪ್ರದರ್ಶನವನ್ನು ವೀಕ್ಷಿಸಲು ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಮಾಯಿಸಿದ್ದರು.
ಸರಿಯಾಗಿ ಸಂಜೆ 5.47ಕ್ಕೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವ ಕ್ಷಣಕ್ಷಣದ ಮಾಹಿತಿಯನ್ನು ಇಸ್ರೋದ ನಿವೃತ್ತ ಎಂಜಿನಿಯರ್ ಗುರುಪ್ರಸಾದ್ ಕನ್ನಡದಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಿದರು. ಸುಮಾರು 5.47ರಿಂದ 6.04 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ತಕ್ಷಣವೇ ಸಚಿವ ಬೋಸರಾಜು ಮತ್ತು ವಿಧಾನ ಪರಿಷತ್ ಪೂಜಾರ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿ ಉಮಾ ಮತ್ತು ತಾರಾಲಯದ ಅಧಿಕಾರಿಗಳು ಹಾಗೂ ವಿಜ್ಞಾನ ತಂತ್ರಜ್ಞಾನ ಸೊಸೈಟಿಯ ವ್ಯವಸ್ಥಾಪಕ ಬಸವರಾಜು ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರು ಹರ್ಷೋದ್ಘಾರದ ಮೂಲಕ ಭಾರತದ ಪರ ಜಯಘೋಷ ಕೂಗಿದರು.
ಬಳಿಕ ವಿಕ್ರಮ್ ಲ್ಯಾಂಡರ್ ಯಶಸ್ಸಿನ ಕುರಿತು ಮಾತನಾಡಿದ ಸಚಿವ ಎನ್.ಎಸ್. ಬೋಸರಾಜು, ಇಡೀ ವಿಶ್ವವೇ ಬೆರಗು ಗಣ್ಣುಗಳಿಂದ ಕಾತರಿಸುತ್ತಿದ್ದ ಐತಿಹಾಸಿಕ ಸಾಧನೆಯ ಬಗ್ಗೆ ಸಂತಸವ್ಯಕ್ತಪಡಿಸಿದರು.
ಇದೊಂದು ಐತಿಹಾಸಿಕ ಮೈಲುಗಲ್ಲಾಗಿದೆ, ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ನಮ್ಮ ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಮುಂದಿನ 14 ದಿನಗಳ ಕಾಲ ಚಂದ್ರನ ಮೇಲ್ಮೈನ ಅಧ್ಯಯನ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಇದೊಂದು ಭಾರತಕ್ಕೆ ಮತ್ತು ವಿಜ್ಞಾನ ತಂತ್ರಜ್ಞಾನದಲ್ಲಿ ಶಕ್ತಿ ಎಷ್ಟೆಂಬುದು ತೋರಿಸಿಕೊಟ್ಟಿದೆ. ಇದರ ಯಶಸ್ವಿಗೆ ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೆ ಶುಭ ಕೋರಿದರು. ಕರ್ನಾಟಕ ಸರ್ಕಾರ ಸಹ ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಗೆ ಮತ್ತು ಬಾಹ್ಯಾಕಾಶ ಸಂಸ್ಥೆಯ ಬೆಳವಣಿಗೆಗೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ ವೃದ್ಧಿಸಲು ತಮ್ಮ ಇಲಾಖೆ ಬೆಂಬಲ ನೀಡಲಿದೆ ಎಂದು ಹೇಳಿದ ಅವರು, ಬಳಿಕ ವಿದ್ಯಾರ್ಥಿಗಳೊಂದಿಗೆ ಸಂತಸ ಹಂಚಿಕೊಂಡರು.
ಇದಕ್ಕೂ ಮುನ್ನ ಮಾತನಾಡಿದ ಅವರು, ರಾಜ್ಯದಲ್ಲಿ 2 ಪ್ರಾದೇಶಿಕ ವಿಜ್ಞಾನ ಕೇಂದ್ರಗಳು, 2 ತಾರಾಲಯಗಳು, 08 ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಿವೆ. 11 ಸಂಚಾರಿ ತಾರಾಲಯಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ವಿದ್ಯಾರ್ಥಿಗಳಲ್ಲಿ ಬಾಲ್ಯಾವಸ್ಥೆಯಿಂದಲೇ ವೈಜ್ಞಾನಿಕ ವಿಷಯಗಳಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ನೂತನ ಯೋಜನೆಯೊಂದನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಸರಕಾರಿ ಪ್ರೌಢ ಶಾಲೆಗಳಲ್ಲಿ ಟೆಲಿಸ್ಕೋಪ್ ಮತ್ತು ಮೈಕ್ರೋಸ್ಕೋಪ್ಗಳನ್ನು ನೀಡಲು, ಹಾಗೆಯೇ, ಈ ಉಪಕರಣಗಳ ನಿರ್ವಹಣೆ ಮತ್ತು ಅವುಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಶಿಕ್ಷಕರುಗಳಿಗೆ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.