ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.21:ರಾಜ್ಯದಲ್ಲಿ ಕುಡಿಯುವ ನೀರಿಗೆ, ಮೇವಿಗೆ ಯಾವುದೇ ಅಭಾವವಿಲ್ಲ. ರೈತರ ಬೆಳೆಗಳಿಗೆ ನೀರಿನ ವ್ಯವಸ್ಥೆಗೋಸ್ಕರ ಕೆಸಿ ವ್ಯಾಲಿ ನೀರು ಹರಿಯುವ ಕೆರೆಗಳನ್ನ ವೀಕ್ಷಣೆ ಮಾಡಿ ಇನ್ನೂ ಹೆಚ್ಚಿನ ನೀರು ಹರಿಸಲು ಗಮನ ನೀಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸೆರಾಜು ಹೇಳಿದರು.
ಹೊಸಕೋಟೆ ತಾಲೂಕಿನ ತಾವರೆಕೆರೆಯ ಕೆರೆ ವೀಕ್ಷಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವರ್ಷ ರಾಜ್ಯಾದ್ಯಾಂತ ತೀವ್ರ ಮಳೆ ಕೊರತೆ ಉಂಟಾಗಿದೆ ಈಗಾಗಳೆ 195 ತಾಲ್ಲೂಕುಗಳನ್ನ ಭರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗಳಿಗೆ 463 ಕೋಟಿ ಹಣವನ್ನ ಕುಡಿಯುವ ನೀರನ್ನು ಪೂರೈಸಲು ಮುಖ್ಯಮಂತ್ರಿ ನೀಡಿದ್ದಾರೆ. ಅಗತ್ಯವಿದ್ದ ಸ್ಥಳಗಳಿಗೆ ಗ್ರಾಮ ಪಂಚಾಯಿತಿಗಳಿಂದ ಟ್ಯಾಂಕರ್ ಅಥವಾ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬರ ಘೋಷಿತ ತಾಲ್ಲೂಕುಗಳ ಹೊರತಾಗಿಯೂಅನೇಕ ತಾಲ್ಲೂಕುಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಂದಿಲ್ಲ. ಬೆಳೆಯೂ ಕೈ ಸೇರಿಲ್ಲ ಅಕಾಲಿಕ ಮಳೆಯಿಂದಾಗಿ ಕೆಲವು ಕಡೆ ಬೆಳೆ ಹಾನಿಯಾಗಿದ್ದು, ಅದರ ಪರಿಹಾರಕ್ಕೆ ಅಧಿಕಾರಿಗಳ ತಂಡವೊಂದನ್ನು ಹಳ್ಳಿಗಳಿಗೆ ಸರ್ವೆಮಾಡಲು ಕಳಿಸಲಾಗಿದೆ. ಬರ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಈಗಾಗಲೇ ಹೊಸಕೋಟೆ ತಾಲ್ಲೂಕಿನದ್ಯಾಂತ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಏತ ನೀರಾವರಿ ಕಾಮಗಾರಿ ನಡೆಯುತ್ತಿದ್ದು, ಶಿಘ್ರದಲ್ಲೇ ಮುಕ್ತಾಯಗೊಂಡು ನೀರು ಸರಬರಾಜು ಆಗುತ್ತದೆ. ಎಲೆಮಲ್ಲಪ್ಪ ಶೆಟ್ಟಿ ಕೆರೆ (ವೆಂಕಯ್ಯಕೆರೆ) ನೀರನ್ನು ಹೊಸಕೋಟೆ ಕೆರೆಗೆ ಹರಿಸಿ ಇಲ್ಲಿಂದ ಅನೇಕ ಕೆರೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ತಾವರೆಕೆರೆಗೆ ಕೆಸಿ ವ್ಯಾಲಿ ನೀರು ಹರಿಸುತ್ತಿದ್ದು ಇಲ್ಲಿಂದ ನಂದಗುಡಿ ಹೋಬಳಿಯ ಅತಿ ಎತ್ತರವಾದ ಕೆರೆಗೆ ನೀರನ್ನು ಪಂಪ್ಮಾಡಿ ಹೋಬಳಿಯಾದ್ಯಾಂತ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಟಿ.ಎಸ್.ರಾಜಶೇಖರ್, ಗ್ರಾಪಂ ಅಧ್ಯಕ್ಷ ಎನ್.ರಮೇಶ್, ಉಪಾಧ್ಯಕ್ಷೆ ಅಸ್ಮಾತಾಜ್ ಜಿಯಾಉಲ್ಲಾ, ಮಾಜಿ ಅಧ್ಯಕ್ಷರುಗಳಾದ ಬಸವಪ್ರಕಾಶ್, ಆರ್.ರವಿಕುಮಾರ್, ದಯಾನಂದ್ಬಾಬು, ಮಾಜಿ ಉಪಾಧ್ಯಕ್ಷ ಎಸ್.ಸುಧಾಕರ್ ಗ್ರಾಪಂ ಸದಸ್ಯರಾದ ಪ್ರಿಯಾಂಕ ಡಿ.ರಮೇಶ್, ಪವಿತ್ರ ಮಂಜುನಾಥ್, ಜಗದೀಶ್ ಎಪಿಎಂಸಿ ಮಾಜಿ ಅಧ್ಯಕ್ಷ ಎಂ ದೇವರಾಜ್, ಮುಖಂಡರಾದ ಮುನೇಯ್ಯ, ಶಶಿಕುಮಾರ್, ಡಿ.ನರಸಿಂಹಯ್ಯ, ನ್ಯಾನಮೂರ್ತಿ ಉಪಸ್ಥಿತರಿದ್ದರು.