ಸುದ್ದಿಮೂಲ ವಾರ್ತೆ
ಸೆ,25:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಇಂದು ಜನತಾ ದರ್ಶನಕ್ಕೆ ಚಾಲನೆ ನೀಡಿದರು. ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜನಸಾಮಾನ್ಯರ ಅಹವಾಲುಗಳನ್ನ ಆಲೀಸಿದ ಸಚಿವರು, ಜನರ ಕೆಲಸ, ಕಾರ್ಯಗಳನ್ನ ಶೀಘ್ರದಲ್ಲಿ ಪರಿಸರಿಸುವಂತೆ ಆಡಳಿತ ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದರು.
ಜನತಾ ದರ್ಶನದ ವೇಳೆ ಮಾತನಾಡಿದ ಸಚಿವರು, ಅರ್ಜಿ ಹಿಡಿದುಕೊಂಡು ಬರುವ ಜನಸಾಮಾನ್ಯರಿಗೆ ಸ್ಪಷ್ಟತೆ ಕೊಡಬೇಕು. ಕೇವಲ ಅರ್ಜಿಗಳನ್ನ ಸ್ವೀಕರಿಸಿದರೆ ಪ್ರಯೋಜನವಿಲ್ಲ. ಸ್ಥಳದಲ್ಲೇ ಅವರಿಗೆ ಪರಿಹಾರ ಒದಗಿಸುವಂತ ವ್ಯವಸ್ಥೆ ಜಾರಿಗೆ ಬರಬೇಕು ಎಂದರು.
ಜನರು ಕೇಳುವ ಕೆಲಸ ಕಾರ್ಯಗಳು ಆಗೋತ್ತದೆಯೋ, ಇಲ್ಲವೋ ಎಂಬ ಸ್ಪಷ್ಟತೆಯನ್ನ ಜನರಿಗೆ ನೀಡಿ. ನೋಡೊಣ, ಮಾಡೊಣ ಎಂದು ಹೇಳಿ ಜನರನ್ನ ಅಲೆದಾಡಿಸುವ ಪರಿಸ್ಥಿತಿಗೆ ತರಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಯಾವ ಕಾರ್ಯಗಳು ಈಡೇರಿಸಲು ಸಾಧ್ಯ ಅವುಗಳನ್ನ ಸಾಧ್ಯವಾದಷ್ಟು ಶೀಘ್ರದಲ್ಲಿ ಮಾಡಿಕೊಡಿ. ಯಾವ ಕೆಲಸಗಳು ಮಾಡಲು ಸಾಧ್ಯವಿಲ್ಲ ಆ ಬಗ್ಗೆ ಜನರಿಗೆ ನೇರವಾಗಿ ನೈಜ ಪರಿಸ್ಥಿತಿಯನ್ನ ತಿಳಿಸಿ ಎಂದರು.
ತಾಲೂಕು ಮಟ್ಟದಲ್ಲೂ ಜನತಾ ದರ್ಶನ
ಜಿಲ್ಲಾ ಕೇಂದ್ರದಲ್ಲಿ ಅಷ್ಟೇ ಅಲ್ಲ ತಾಲೂಕು ಮಟ್ಟದಲ್ಲೂ ಜನತಾ ದರ್ಶನಗಳನ್ನ ನಡೆಸುವಂತೆ ಇದೇ ವೇಳೆ ದಿನೇಶ್ ಗುಂಡೂರಾವ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಜಿಲ್ಲಾಡಳಿತ ಜನರ ಬಳಿಗೆ ಹೋಗಬೇಕು. ಗ್ರಾಮೀಣ ಪ್ರದೇಶದ ಹಲವು ಜನರಿಗೆ ಜಿಲ್ಲಾ ಕೇಂದ್ರಗಳಿಗೆ ಬರಲು ಕಷ್ಟವಾಗಿರುತ್ತದೆ. ಹೀಗಾಗಿ
ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಿದರೆ, ಹಳ್ಳಿಗಾಡಿನ ಜನರಿಗೆ ತಮ್ಮ ಸಮಸ್ಯಗಳನ್ನ ಪರಿಹರಿಸಿಕೊಳ್ಳಲು ಅನುಕೂಲವಾಗಲಿದೆ.
ಮುಂದಿನ ಜನತಾ ದರ್ಶನಗಳನ್ನ ತಾಲೂಕುಗಳಲ್ಲಿ ಆಯೋಜಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಜಿಲ್ಲೆಯಲ್ಲಿ ಇರುವ 9 ತಾಲೂಕುಗಳಲ್ಲೂ ಹಂತ ಹಂತವಾಗಿ ಜನತಾ ದರ್ಶನಗಳನ್ನ ಆಯೋಜಿಸಲಾಗುವುದು ಎಂದು ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.