ಸುದ್ದಿಮೂಲ ವಾರ್ತೆ
ನ,8:ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉತ್ತಮ ವೈದ್ಯಕೀಯ ಸೇವೆಗಳನ್ನ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಖಾಸಿಗಿ ಸಂಸ್ಥೆಗಳು ತಮ್ಮ ಸಿಎಸ್.ಆರ್ ಪಂಡ್ ವಿನಿಯೋಗಿಸುವತ್ತು ಮುಂದಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಅವರು ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ C-camp ಆಯೋಜಿಸಿದ್ದ ಸಿಎಸ್.ಆರ್ ಪಾಲುದಾರಿಕೆ ಕುರಿತ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ದುಂಡುಮೇಜಿನ ಸಭೆಯ ಸಂದರ್ಭದಲ್ಲಿ ಮಾನ್ಯ ಸಚಿವರು, ಕೈಗೆಟಕುವಿಕೆ, ಲಭ್ಯತೆ, ಗುಣಮಟ್ಟ ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತರುವ ವಿಚಾರದ ಕುರಿತು ಮಾತನಾಡಿದರು. ಉತ್ತಮ ವೈದ್ಯಕೀಯ ವ್ಯವಸ್ಥೆ ಮೂಲಕ ಕರ್ನಾಟಕವು ಇತರ ರಾಜ್ಯಗಳಿಗೆ ಮಾದರಿಯಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು. ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಕಲಿತು, ಕಾರ್ಯಗತಗೊಳಿಸಲು ಸನ್ನದ್ಧರಾಗಿದ್ದೇವೆ. ಕರ್ನಾಟಕವು ಹೊಸತನ ಹಾಗೂ ತಂತ್ರಜ್ಞಾನದ ಹೆಸರಾಗಿದ್ದು, ನಮ್ಮ ಗುರಿಯನ್ನು ಸಾಧಿಸಲು ಸಂಪೂರ್ಣ ಅವಕಾಶ ಇಲ್ಲಿ ಸಿಗಲಿದೆ. ಸಮಾನ ಮನಸ್ಕ ಸಹಯೋಗಗಳು ಮತ್ತು ಪಾಲುದಾರಿಕೆಗಳ ಮೂಲಕ ಮಾತ್ರ ನಾವು ಇದನ್ನು ಸಾಧಿಸಬಹುದು ಎಂದು ನಾನು ನಂಬುತ್ತೇನೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ಹಣಕಾಸು ಅನುದಾನ ಮಾಡುವ ಮೂಲಕ ನಮ್ಮ ಆರೋಗ್ಯ ಸೌಲಭ್ಯವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು,ನೂತನ ತಂತ್ರಜ್ಞಾನ, ಆಧುನಿಕ ಅಭ್ಯಾಸಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ. ಈ ಮೂಲಕ ಉತ್ತಮ ವೈದ್ಯಕೀಯ ಸೌಲಭ್ಯಗಳು ಪ್ರತಿಯೊಬ್ಬರಿಗೂ ದೊರಕುವುದು ಸಾಧ್ಯವಾಗುತ್ತದೆ. ಈಗಾಗಲೇ ಈ ಕುರಿತು ಚರ್ಚೆ ನಡೆಸುತ್ತಿದ್ದು, ಫಲಿತಾಂಶ- ಆಧಾರಿತ ವಿಧಾನದ ಕಡೆಗೆ ಕೆಲಸ ಮಾಡುತ್ತಿದ್ದೇವೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು C-CAMP ನಡುವಿನ ಕಾರ್ಯತಂತ್ರದ ಮೈತ್ರಿಯ ರಚನೆಯನ್ನು ದುಂಡುಮೇಜಿನ ಅನುಸರಿಸುತ್ತದೆ, ಇದು ಸ್ಥಳೀಯ ಆವಿಷ್ಕಾರಗಳ ಅನುಷ್ಠಾನದ ಮೂಲಕ ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಟಿ.ಕೆ ಅನಿಲ್, ಆಯುಕ್ತರಾದ ಶ್ರೀ ಡಿ. ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರಾದ ಶ್ರೀ ನವೀನ್ ಭಟ್ ಸೇರಿದಂತೆ ಯು.ಎಸ್.ಎ.ಐ.ಡಿ, ಇನ್ಫೋಸಿಸ್ ಫೌಂಡೇಶನ್, ಎಸಿಟಿ ಕ್ಯಾಪಿಟಲ್ ಫೌಂಡೇಶನ್, ಪಿಎಟಿಹೆಚ್, ಯುನಿಸೆಫ್, ನೊವೊ ನಾರ್ಡಿಸ್ಕ್ ಫೌಂಡೇಶನ್, ಬಯೋಕಾನ್ ಫೌಂಡೇಶನ್, ಅಸ್ಟ್ರಾಜೆನೆಕಾ, ಸಿಪ್ಲಾ, ಜಿಇ ಹೆಲ್ತ್ ಕೇರ್, ಹೆಚ್.ಸಿ.ಎಲ್ ಫೌಂಡೇಶನ್ ನಂತರ ಹಲವು ಕಾರ್ಪೋರೇಟ್ ಸಂಸ್ಥೆಗಳು ಮತ್ತು ದತ್ತಿ ಸಂಸ್ಥೆಗಳ ಉದ್ಯಮ ಮುಖ್ಯಸ್ಥರು, ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಇನ್ನು ಈ ವೇಳೆ ಹೆಲ್ತ್ಟೆಕ್ ಪರಿಹಾರಗಳಿಗಾಗಿ ಪ್ರಸಿದ್ಧವಾದ ಭಾರತದ ಉನ್ನತ ನಾವೀನ್ಯತೆ ಕೇಂದ್ರವಾದ C-CAMP ಸಂವಾದವನ್ನು ನಡೆಸಿತು.
ಸಿ-ಕ್ಯಾಂಪ್ ನಿರ್ದೇಶಕ-ಸಿಇಒ ಡಾ ತಸ್ಲಿಮರಿಫ್ ಸೈಯದ್ ಮಾತನಾಡಿ, ಕರ್ನಾಟಕ ಸರ್ಕಾರ, ಸಿ-ಕ್ಯಾಂಪ್, ಸಿ.ಎಸ್.ಆರ್ ಮತ್ತು ದತ್ತಿ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಮುಂದಿನ 3-5 ವರ್ಷಗಳವರೆಗೆ ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ನಡೆಯಬೇಕಾದ ಕ್ರಾಂತಿ, ತಂತ್ರಜ್ಞಾನಗಳ ನಾವಿನ್ಯತೆ ಹಾಗೂ ಸ್ಥಳೀಯ ಆರೋಗ್ಯ ವ್ಯವಸ್ಥೆಯಲ್ಲಾಗುವ ಬದಲಾವಣೆಗಳ ಮಾರ್ಗಸೂಚಿಯಲ್ಲಿ ಕೆಲಸ ಮಾಡುವುದಾಗಿದೆ.
ಇಂತಹ PPP ಹೊಸ ತಂತ್ರಜ್ಞಾನದ ಅಳವಡಿಕೆ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲೂ ಹೊಸ ಇತಿಹಾಸ ಸೃಷ್ಟಿಸಲು ಸಹಾಯಕಾರಿಯಾಗಿದೆ. ಈ ಯೋಜನೆಗಳಿಂದ ಸಕ್ರಿಯಗೊಳಿಸಲಾದ ಪ್ರಾಯೋಗಿಕ ಮತ್ತು ಸ್ಕೇಲ್-ಅಪ್ ಕಾರ್ಯಕ್ರಮಗಳು ಭಾರತದ ಜೈವಿಕ ತಂತ್ರಜ್ಞಾನದ ರಾಜಧಾನಿಯಾಗಿರುವ ಕರ್ನಾಟಕದಲ್ಲಿ ನೆಲೆಗೊಂಡಿರುವ ವಿಜ್ಞಾನ ಆಧಾರಿತ ವಾಣಿಜ್ಯೋದ್ಯಮಗಳಿಗೆ ಪ್ರಯೋಜನಕಾರಿಯಾಗಿದೆ.