ಸುದ್ದಿಮೂಲ ವಾರ್ತೆ
ತುಮಕೂರು,ಸೆ.25 : ಸಾರ್ವಜನಿಕರಿಂದ ಯಾವುದೇ ಅರ್ಜಿ ಬಂದಲ್ಲಿ ಅದನ್ನು ತಿರಸ್ಕರಿಸಬಾರದು. ಆದಷ್ಟು ಸಕಾರಾತ್ಮಕವಾಗಿ ಸ್ಪಂದಿಸುವಂತಹ ಕೆಲಸ ಸರ್ಕಾರಿ ಅಧಿಕಾರಿಗಳಿಂದ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
‘ಗಾಜಿನ ಮನೆ ಅಮಾನಿಕೆರೆ’ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜನತಾ ದರ್ಶನ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡು ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ 3 ದಿನಗಳ ಹಿಂದೆಯೇ ವಿವಿಧ ಇಲಾಖೆಗಳ ಕೌಂಟರ್ಗಳನ್ನು ತೆರೆದು ಸಾರ್ವಜನಿಕರಿಗೆ ಅಹವಾಲು ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರತಿ ತಿಂಗಳು ಒಂದೊಂದು ತಾಲ್ಲೂಕಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಎಲ್ಲಾ ಅಧಿಕಾರಿಗಳು ನಿಮ್ಮ ತಾಲ್ಲೂಕಿಗೆ ಬರುತ್ತಾರೆ ಎಂದು ತಿಳಿಸಿದರು.
ಸಾರ್ವಜನಿಕರ ಅಹವಾಲು ಆಲಿಸುವ ಕೆಲಸ ತಾಲ್ಲೂಕು, ಹೋಬಳಿ, ಗ್ರಾಮಪಂಚಾಯತಿ ಮಟ್ಟದಲ್ಲೂ ಆಗಬೇಕಿದೆ. ಜನರ ಕೆಲಸಗಳು ಪ್ರಾಥಮಿಕವಾಗಿ ಪ್ರಾರಂಭವಾಗುವ ಸ್ಥಳ ಗ್ರಾಮಪಂಚಾಯತಿಗಳು. ಅಲ್ಲಿ ಸಮಸ್ಯೆ ಬಗೆಹರಿದಲ್ಲಿ ಜನರು ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಕೇಂದ್ರಗಳಿಗೆ ತರುವುದಿಲ್ಲ ಎಂದರು.
ಇಂದಿನ ಜನತಾದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದಂತಹ ಬಹುತೇಕ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ. ತಹಶೀಲ್ದಾರರು ಸಲ್ಲಿಕೆಯಾದಂತಹ ಅರ್ಜಿಗಳನ್ನು ಇಟ್ಟುಕೊಳ್ಳದೆ, ನಿಗಧಿತ ಅವಧಿಯೊಳಗಾಗಿ ವಿಲೇವಾರಿ ಮಾಡಬೇಕು. ಮುಂದಿನ ದಿನಗಳಲ್ಲಿ ಅರ್ಜಿ ದಾಖಲಾದ ದಿನ, ವಿಲೇವಾರಿಯಾದ ದಿನಾಂಕವನ್ನೂ ಸಹ ಇಲಾಖಾವಾರು ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕರು ಐಪಿಜಿಆರ್ಎಸ್ ಮೂಲಕ ತಮ್ಮ ಅಹವಾಲುಗಳನ್ನು ಸಲ್ಲಿಸಿ ಸ್ವೀಕೃತಿ ಪಡೆಯಬಹುದಾಗಿರುತ್ತದೆ ಮತ್ತು ಸಲ್ಲಿಕೆಯಾದಂತಹ ಅರ್ಜಿಗಳನ್ನು ಇನ್ನು 10-15 ದಿನಗಳೊಳಗಾಗಿ ಇತ್ಯರ್ಥಪಡಿಸುವುದಾಗಿ ತಿಳಿಸಿದರು.