ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಆ.30: ನೂತನ ಸರ್ಕಾರ ನೂರು ದಿನ ಪೂರೈಸಿದ ಹೊಸ್ತಿಲಲ್ಲಿ ನುಡಿದಂತೆ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿರುವುದು ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವ ಎಂ. ಸಿ.ಸುಧಾಕರ್ ಅವರು ಬಣ್ಣಿಸಿದರು.
ಬುಧವಾರ ನಗರದ ಶ್ರೀ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಅರ್ಹರಿರುವ 2,99,909 ಗೃಹಿಣಿಯರಲ್ಲಿ 2,51,530 ಮಹಿಳೆಯರು ಈವರೆಗೆ ನೊಂದಣಿ ಆಗಿದ್ದು, ಈ ಪೈಕಿ ಜಿಲ್ಲೆಯ 1 ಲಕ್ಷ ಮಹಿಳೆಯರ ಖಾತೆಗೆ ಡಿ.ಬಿ.ಟಿ ಮುಖಾಂತರ 2 ಸಾವಿರ ರೂ.ಗಳು ವರ್ಗಾವಣೆಯಾಗಿದೆ. ಬಾಕಿ ಉಳಿದಿರುವ ನೋಂದಯಿತರಿಗೆ ಹಂತ ಹಂತವಾಗಿ ಹಣ ಜಮೆಯಾಗಲಿದೆ. ಈ ಗೃಹಲಕ್ಷ್ಮಿ ಸಹಾಯಧನ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೆಚ್ಚು ಸಹಾಯವಾಗಲಿದೆ. ಕುಟುಂಬದ ನಿರ್ವಹಣೆ ಹೊತ್ತಿರುವ ಯಜಮಾನಿ ಮಹಿಳೆಗೆ ತನ್ನ ಆರ್ಥಿಕ ಅಸಮತೋಲನ ನಿವಾರಿಸಲಿದೆ ಎಂದು ತಿಳಿಸಿದರು.
ನಿರುದ್ಯೋಗಿ ಪದವೀಧರರಿಗೆ 3 ರೂ. ಗಳನ್ನು ಕೊಡುವ ಯುವ ನಿಧಿ ಯೋಜನೆ ಮುಂದಿನ ತಿಂಗಳು ಜಾರಿಯಾಗಲಿದೆ. ಪದವಿ ಮುಗಿಸಿ ಉದ್ಯೋಗ ಸಿಗದ ಉದ್ಯೋಗಾಂಕ್ಷಿಗಳಿಗೆ ಆರು ತಿಂಗಳ ನಂತರ 3 ಸಾವಿರ ರೂ.ಗಳನ್ನು ಮತ್ತು ಡಿಪ್ಲೊಮೋ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ಮಾಸಿಕ 1500 ರೂಗಳನ್ನು ಕೊಡುವ ಕಾರ್ಯಕ್ರಮ ಜಾರಿಯಾಗಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಮಾತನಾಡಿ, ಸರ್ಕಾರವು ಘೋಷಿಸಿರುವ 5 ಪ್ರಮುಖ ಮಹತ್ವಕಾಂಕ್ಷಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಒಂದಾಗಿದೆ. ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಆ ಸಾಲಿಗೆ ಗೃಹಲಕ್ಷ್ಮೀ ಸೇರ್ಪಡೆಯಾಗಿದೆ. ಕುಟುಂಬದ, ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ನಿರ್ವಹಣೆಯು ಸುಲಭವಾಗಲಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ ಈವರೆಗೆ ಅರ್ಹರಿರುವ ಶೇ. 83.98 ರಷ್ಟು ಮಹಿಳೆಯರನ್ನು ನೋಂದಣಿ ಮಾಡಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯು ಮಹಿಳೆಯ ಸಬಲೀಕರಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ದಿನ ಒಂದು ದಿನದ ಊಟಕ್ಕೂ ಹೋರಾಟ ನಡೆಸುವಂತಹ ವರ್ಗದ ಜನರಿಗೆ ದೇವರಂತೆ ಕಾಣಿಸುತ್ತವೆ ಇಂತಹ ಯೋಜನೆಗಳ ಫಲಾನುಭವವನ್ನು ಅರ್ಹರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಮೈಸೂರಿನಿಂದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರದರ್ಶಿಸಲಾಯಿತು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾದ ಅರುಣ, ಎಂ.ಎಸ್ ಲಲಿತಮ್ಮ, ಜಮೀಲಾ ಬೇಗಂ, ಶುಭ ಜಿ.ವಿ, ಗಾಯತ್ರಿ, ಸಾವಿತ್ರಿ ಅವರಿಗೆ ಮಂಜೂರಾತಿ ಆದೇಶ ಪತ್ರವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಶ್ವತ್ಥಮ್ಮ.ಸಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ಸೇರಿದಂತೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಹಾಜರಿದ್ದರು.
ಪ್ರತಿಕ್ರಿಯೆಗಳು:
ಜೀವನದಲ್ಲಿ ಎದುರಾಗುವ ಹಣಕಾಸಿನ ತುರ್ತು ಸಮಸ್ಯೆಗಳಾದ ಆರೋಗ್ಯ ಮತ್ತು ಮಕ್ಕಳ ವಿದ್ಯಾಭ್ಯಾಸ ವೆಚ್ಚಕ್ಕೆ ಗೃಹಲಕ್ಷ್ಮೀಯ 2000 ರೂಗಳ ಧನಸಹಾಯ ಬಹಳ ಸಹಕಾರಿಯಾಗಲಿದೆ.
ಮುನಿರತ್ನಮ್ಮ, ಫಲಾನುಭವಿ
ಮನೆ ಬಾಡಿಗೆ, ಅನಿಲ ವೆಚ್ಚ, ತರಕಾರಿ ಮತ್ತು ಆಹಾರ ಉತ್ಪನ್ನಗಳು ಈ ರೀತಿಯ ಮೂಲಭೂತ ಅಗತ್ಯಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಹಾಯವಾಗಲಿದ್ದು, ಅದರಲ್ಲಿಯೂ ವಯೋವೃದ್ಧ ಯಜಮಾನಿ ಮಹಿಳೆಯರಿಗೆ
ವರದಾನವಾಗಲಿದೆ.
ಭರಣಿ, ಫಲಾನುಭವಿ