ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಆ.23: ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಕುಡಿಯುವ ನೀರು ನೀಡುವ ಜಲಜೀವನ್ ಮಿಷನ್ ಯೋಜನೆ ಜಾರಿಯು ಜಿಲ್ಲೆಯಲ್ಲಿ ವಿಫಲ ಆಗಲು ಬಿಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುದಾಕರ್ ತಿಳಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಸಂಬಂಧ ಜಿಲ್ಲೆಯಲ್ಲಿರುವ ತೊಡಕುಗಳನ್ನು ನಿವಾರಿಸಲು ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ನಿಜವಾದ ಸಮಸ್ಯೆಗಳನ್ನು ಕಲೆ ಹಾಕಿ ಮಾತನಾಡಿದರು.
ಜಲಜೀವನ್ ಯೋಜನೆಯ ಅನುಷ್ಠಾನಕ್ಕೆ ಸ್ಥಳೀಯವಾಗಿರುವ ಸಮಸ್ಯೆಗಳ ನಿವಾರಣೆಗೆ ಸಭೆಯಲ್ಲೇ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನವನ್ನು ಸಚಿವರು ಮಾಡಿದರು. ಜೊತೆಗೆ ಸ್ಥಳೀಯವಾಗಿ ನಿವಾರಿಸಲು ಸಾಧ್ಯವಿರದ ಸಮಸ್ಯೆಗಳ ಕುರಿತು ಸಂಬಂದಪಟ್ಟ ಸಚಿವರೊಂದಿಗೆ ಚರ್ಚಿಸಿ ನಿವಾರಣೆಗೆ ಯತ್ನಿಸಲಾಗುವುದು. ಈ ಹಿನ್ನೆಯಲ್ಲಿ ಯೋಜನೆಯ ಯಶಸ್ವಿಗೆ ಸ್ಥಳೀಯ ಸಾರ್ವಜನಿಕರ, ಗುತ್ತಿಗೆದಾರರ ಸಹಕಾರಬೇಕು ಎಂದರು.
2024ರ ವೇಳೆ ಒಳಗೆ ಈ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಸುಮಾರು ಗ್ರಾಮಗಳಲ್ಲಿನ ಕಾಮಗಾರಿಗಳ ಟೆಂಡರ್ ನಲ್ಲಿ ಗುತ್ತಿಗೆದಾರರು ಭಾಗವಹಿಸುತ್ತಿಲ್ಲ. ಆದ್ದರಿಂದ, ಜಿಲ್ಲೆಯ 1,100 ಗ್ರಾಮಗಳಲ್ಲಿ ಯೋಜನೆಯ ಅನುಷ್ಠಾನ ವಿಳಂಬ ಆಗಿದೆ, 1,002 ಗ್ರಾಮಗಳಲ್ಲಿ ಟೆಂಡರ್ ಮಾಡಬೇಕಿದೆ. ಒಟ್ಟಾರೆ ಜಿಲ್ಲೆಯ 1,645 ಗ್ರಾಮಗಳಲ್ಲಿ ಈ ಯೋಜನೆಯ ಅನುಷ್ಠಾನದ ಗುರಿ ಇದೆ. ಆ ಹಿನ್ನೆಲೆಯಲ್ಲಿ ತೊಡಕುಗಳನ್ನು ನಿವಾರಿಸಲು ಸಭೆ ಕರೆಯಲಾಗಿದೆ ಎಂದು ತಿಳಿಸಿ ಗುತ್ತಿಗೆದಾರ ಸಮಸ್ಯೆಗಳನ್ನು ಸವಿಸ್ತಾರವಾಗಿ ಸಚಿವರು ಆಲಿಸಿ ಪರಿಹರಿಸಲು ಯತ್ನಿಸಿದರು.
ಈ ಸಂಧರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಜಿಲ್ಲಾ ಅರಣ್ಯಾಧಿಕಾರಿ ರಮೇಶ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಡಾ.ಎನ್.ಭಾಸ್ಕರ್, ಗುತ್ತಿಗೆದಾರರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.