ಸುದ್ದಿಮೂಲ ವಾರ್ತೆ
ಮೈಸೂರು,ಸೆ.25:ಒಂದಲ್ಲ, ಎರಡಲ್ಲ, ನೂರಾರು ಸಮಸ್ಯೆಗಳ ಮಹಾಪೂರವೇ ಹರಿದು ಬಂತು. ಪಡಿತರ ಚೀಟಿ ಎಷ್ಷೇ ಅಲೆದರೂ ಸಿಕ್ಕಿಲ್ಲ, ಮನೆ ಖಾತೆ ಬದಲಾವಣೆ ಆಗಬೇಕು, ಮನೆ ಬೇಕು. ವಿದ್ಯುತ್ ಕಂಬ ಅಳವಡಿಸಿಕೊಡಿ, ಜಮೀನಿಗೆ ಕೊಳವೆ ಬಾವಿ ಕೊಡಿಸಿ, ಸಣ್ಣಪುಟ್ಟ ಕೆಲಸ ಮಾಡಿಕೊಡಲು ಅಧಿಕಾರಿಗಳು ಕಚೇರಿಗೆ ಅಲೆಸಿ ಸತಾಯಿಸುತ್ತಾರೆ.
ಹೀಗೆ ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಜನತಾ ದರ್ಶನದಲ್ಲಿ ಹರಿದು ಬಂದ ಜನರ ಸಮಸ್ಯೆಗಳನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಗಮನಕ್ಕೆ ತಂದರಲ್ಲದೇ ಇಲಾಖಾಧಿಕಾರಿಗಳ ವಿರುದ್ದ ದೂರಿದರು.
ಆಗ ಸಚಿವರು, ಗಂಟೆಗಟ್ಟಲೇ ಜನರ ನೋವು, ನಲಿವುಗಳನ್ನು ಕಿವಿಯಾರೆ ಕೇಳಿ, ಕೂಡಲೇ ಪರಿಹರಿಸಬೇಕು ಎಂದು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸಚಿವರು ಮಾತನಾಡಿ, ಜನರು ತಾಲೂಕು ಕಚೇರಿಗೆ, ಪೊಲೀಸ್ ಠಾಣೆಗೆ, ಗ್ರಾಮ ಪಂಚಾಯ್ತಿ ಕಚೇರಿ ಸೇರಿದಂತೆ ಅನೇಕ ಕೆಲಸಗಳಿಗಾಗಿ ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ತಿಂಗಳಪೂರ್ತಿ ಅಲೆಯಬಾರದು. ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಜನರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವಲ್ಲಿ ತುರ್ತಾಗಿ ಕ್ರಮವಹಿಸಬೇಕು ಎಂದು ಸೂಚಿಸಿದರು.
ಬಡಜನರು ತಮ್ಮ ತಾಳಿ, ಓಲೆಗಳನ್ನು ಅಡವಿಟ್ಟು ಸರ್ಕಾರದ ಸೌಲಭ್ಯ ಪಡೆಯುವಂಥ ಉದಾಹರಣೆ ಕಂಡಿದ್ದೇವೆ. ಇದ್ಯಾವುದಕ್ಕೂ ಅವಕಾಶ ನೀಡದೆ ನಮ್ಮ ಆಡಳಿತವನ್ನು ನೇರವಾಗಿ ಜನರ ಬಳಿಗೆ ಕರೆದೊಯ್ಯುವುದು ನಮ್ಮ ಸರ್ಕಾರದ ಉದ್ದೇಶ ಮತ್ತು ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಜನರೊಂದಿಗೆ ಸಂವಾದ ಮಾಡದಿದ್ದರೆ, ಅವರ ಕಷ್ಟ ಕಾರ್ಪಣ್ಯ ಅರಿವಾಗುವುದಿಲ್ಲ. ಕಡ್ಡಾಯವಾಗಿ ತಿಂಗಳಲ್ಲಿ ಎಂಟು ದಿನ ಪ್ರವಾಸ ಕೈಗೊಳ್ಳಬೇಕು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಸ್ಪಂದಿಸಿದರೆ ನಿಮ್ಮ ಕೆಲಸಕ್ಕೆ ಸಾರ್ಥಕತೆ ದೊರಕುತ್ತದೆ. ಜನರ ಕಷ್ಟಗಳನ್ನು ಸಕಾಲಕ್ಕೆ ಬಗೆಹರಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಇದನ್ನು ಗಮನದಲ್ಲಿರಿಸಿ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.