ಸುದ್ದಿಮೂಲ ವಾರ್ತೆ
ಮೈಸೂರು,ಆ.9:ಅಧಿಕಾರಿಗಳು ಉತ್ತಮ ಆಡಳಿತಕ್ಕೆ ಅನುವಾಗುವ ಬದಲಾಗಿ ಜನ ಸಾಮಾನ್ಯರ ಸಾವಿರಾರು ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸದೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.
ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವರು, 6 ತಿಂಗಳಿಂದ 5 ವರ್ಷಗಳ ವರೆಗಿನ ಎಲ್ಲಾ ತಕರಾರು ಪ್ರಕರಣಗಳನ್ನೂ ತಹಶೀಲ್ದಾರ್, ಎಸಿ ಹಾಗೂ ಡಿಸಿ ನ್ಯಾಯಾಲಯಗಳು ಮೂರು ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದರು.
ಪರಿಶೀಲನೆಯ ವೇಳೆ ಎಸಿ-ಡಿಸಿ ನ್ಯಾಯಾಲಯಗಳಲ್ಲೂ ಬಾಕಿ ಇರುವ ಪ್ರಕರಣಗಳ ಬಗ್ಗೆ ಅಸಮಾಧಾನ ಹೊರಹಾಕಿದ ಸಚಿವರು, “ಉನ್ನತ ಅಧಿಕಾರಿಗಳೇ ತಮ್ಮ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸದಿದ್ದರೆ, ತಹಶೀಲ್ದಾರರಿಂದ ನೀವು ಹೇಗೆ ಪರಿಣಾಮಕಾರಿ ಕೆಲಸವನ್ನು ನಿರೀಕ್ಷೆ ಮಾಡಲು ಸಾಧ್ಯ. ಹೀಗಾಗಿ ನೀವು ಇತರರಿಗೆ ತಪ್ಪು ಉದಾಹರಣೆಯಾಗಬೇಡಿ ಎಂದು ವಿಷಾದಿಸಿದರು.
ಅಲ್ಲದೆ, “ಉಪ ವಿಭಾಗಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ 6 ತಿಂಗಳಿಗಿಂತ ಹಳೆಯ ಎಲ್ಲಾ ಪ್ರಕರಣಗಳೂ ಸೇರಿದಂತೆ ಉಳಿದ 7000 ಪ್ರಕರಣಗಳನ್ನೂ ಮುಂದಿನ 4 ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಕೊಳ್ಳೆಗಾಲ 540, ಚಿಕ್ಕಮಗಳೂರು 473, ತರೀಕರೆ 952, ಮಂಗಳೂರು 3627, ಪುತ್ತೂರು 243, ಹಾಸನ 678, ಸಕಲೇಶಪುರ 189, ಮಡಿಕೇರಿ 827, ಮಂಡ್ಯ 1456, ಪಾಂಡವಪುರ 1111, ಮೈಸೂರು 1535, ಹುಣಸೂರು 751, ಮತ್ತು ಕುಂದಾಪುರದಲ್ಲಿ 2061 ಪ್ರಕರಣಗಳು ಸೇರಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಒಟ್ಟಾರೆಯಾಗಿ 14,444 ಪ್ರಕರಣಗಳು ಬಾಕಿ ಇವೆ.
ಇದರ ಜೊತೆಗೆ ತಹಶೀಲ್ದಾರರು ವಾರದಲ್ಲಿ ಕನಿಷ್ಟ 2 ದಿನ ನ್ಯಾಯಾಲಯ ನಡೆಸಿ ಪ್ರಕರಣಗಳ ವಿಲೇವಾರಿಗೆ ವೇಗ ನೀಡಬೇಕು. ಉಪವಿಭಾಗಾಧಿಕಾರಿಗಳು ವಾರದಲ್ಲಿ 3 ದಿನ ನ್ಯಾಯಾಲಯ ನಡೆಸಿ ಬಾಕಿ ಪ್ರಕರಣಗಳನ್ನು ತ್ವರಿತ ವಿಲೇವಾರಿಗೊಳಿಸಿ ಜನರಿಗೆ ಆಗುತ್ತಿರುವ ವಿಳಂಬವನ್ನು ಪರಿಹರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿಯಿ. ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳ ವಿಲೇವಾರಿ ನೆಪದಲ್ಲಿ ಗುಣಮಟ್ಟದ ಜೊತೆಗೆ ಹೊಂದಾಣಿಕೆ ಸಲ್ಲದು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹೌಸಿಂಗ್ ಸ್ಕೀಮ್ ದುರುಪಯೋಗವಾಗಬಾರದು
ಮಳೆ-ಪ್ರವಾಹದ ಕಾರಣಕ್ಕೆ ಮನೆ ಕಳೆದುಕೊಂಡವರಿಗೆ ನಾವು ತ್ವರಿತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ.. 2019 ರಿಂದ 2022ರ ಅವಧಿಯಲ್ಲಿ ಮೈಸೂರು ವಿಭಾಗದ 9 ಜಿಲ್ಲೆಗಳಲ್ಲಿ ಸಾವಿರಾರು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮನೆ ದುರಸ್ಥಿಗೂ ಫಲಾನುಭವಿಗಳಿಗೆ ಹಣ ಮಂಜೂರು ಮಾಡಲಾಗಿದೆ. ಆದರೆ, ಕೆಲವರು ಈ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳೂ ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸದೆ ಸರ್ಕಾರವನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ ಎಂದು ಹೇಳಿದರು.
ಮಳೆಯಿಂದ ಮನೆ ರಿಪೇರಿಯಾದವರಿಗೆ ಸರ್ಕಾರ 50,000 ರೂ. ಹಾಗೂ ಸಂಪೂರ್ಣ ಮನೆ ಕಳೆದುಕೊಂಡವರಿಗೆ 1.3 ಲಕ್ಷ ಹಾಗೂ ಮನೆ ಮರು ನಿರ್ಮಾಣಕ್ಕೆ 3.7 ಲಕ್ಷ ರೂ. ಸೇರಿ ಒಟ್ಟಾರೆ 5 ಲಕ್ಷ ರೂ. ನೀಡುತ್ತೇವೆ. ಆದರೆ, ಕೆಲವು ಫಲಾನುಭವಿಗಳು ಮನೆಯನ್ನೇ ಕಟ್ಟಿಲ್ಲ ಎಂದರು.
ರಿಪೇರಿ ಮಾಡಿದ ಬಗ್ಗೆ ದಾಖಲೆಯೇ ಇಲ್ಲ
2018-19ರಲ್ಲಿ ಫಲಾನುಭವಿಗಳಿಗೆ ಮನೆ ರಿಪೇರಿಗೆ ಹಣ ನೀಡಲಾಗಿದೆ. ಆದರೆ, ಹಣ ಪಡೆದವರು ಇನ್ನೂ ಮನೆ ರಿಪೇರಿ ಮಾಡಿದ ದಾಖಲೆಯೇ ಇಲ್ಲ. ಐದು ವರ್ಷಗಳಿಂದ ಫಲಾನುಭವಿಗಳು ರಿಪೇರಿ ಮಾಡದ ಮನೆಯಲ್ಲೇ ಇದ್ದಾರ? ಇದು ಹೇಗೆ ಸಾಧ್ಯ ? ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಸಚಿವರು ಜಿಲ್ಲಾಧಿಕಾರಿಗಳು ಇನ್ನಾದರೂ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಮುನ್ನ ಎಚ್ಚರವಹಿಸಬೇಕು. ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಹಳೆಯ ಕಡತಗಳನ್ನು ಶೀಘ್ರ ವಿಲೇವಾರಿಗೊಳಿಸಿ ಎಂದು ತಿಳಿಸಿದರು.
ಆಗಸ್ಟ್ 15ರಿಂದ ಈ-ಆಫೀಸ್
ನವೀನ ತಂತ್ರಜ್ಞಾನ ಬಳಸಿಕೊಂಡು ಆಡಳಿತಕ್ಕೆ ವೇಗ ನೀಡಲು, ಕಡಿತ ವಿಲೇವಾರಿ ತ್ವರಿತಗೊಳಿಸಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಆಗಸ್ಟ್ 15 ರಿಂದ ಜಿಲ್ಲಾಧಿಕಾರಿಗಳು ಈ-ಆಫೀಸ್ ಮುಖಾಂತರವೇ ಕೇಂದ್ರ ಕಚೇರಿಯೊಂದಿಗೆ ವ್ಯವಹರಿಸಬೇಕು ಎಂದು ಸೂಚಿಸಿದರು.
3 ತಿಂಗಳಲ್ಲಿ ಎಲ್ಲಾ ಪೈಕಿ ಪಹಣಿಗಳನ್ನು ಪರಿಹರಿಸಲು ಸೂಚಿಸಿದರು. ಇದೇ ವೇಳೆ ಕೆರೆಗಳ ಒತ್ತುವರಿ ತೆರವಿಗೂ ಅಧಿಕಾರಿಗಳು ಮುಂದಾಗಬೇಕು. ಕೆರೆ ಒತ್ತುವರಿ ತೆರವು ನಿಜವಾದ ಜನಪರ ಸರ್ಕಾರದ ಕೆಲಸ ಮತ್ತು ಕರ್ತವ್ಯ. ಅಲ್ಲದೆ, ಇದರಿಂದ ಜನ ಸಾಮಾನ್ಯರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲ್ ಕುಮಾರ್ ಸೇರಿದಂತೆ ಮೈಸೂರು ವಿಭಾಗದ 9 ಜಿಲ್ಲೆಯ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಇದ್ದರು.