ಸುದ್ದಿಮೂಲ ವಾರ್ತೆ
ಮೈಸೂರು, ಆ.15: ಮೈಸೂರು ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ 77 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಬಿಸಿಲಿನ ತಾಪಕ್ಕೆ ಸುಸ್ತಾಗಿ, ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಪ್ರಸಂಗ ನಡೆಯಿತು.
ನಗರದ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಧ್ವಜನಾರೋಹಣ ನೆರವೇರಿಸಿ ಮಾತನಾಡಿದರು.
ಬಳಿಕ ಸುದೀರ್ಘವಾಗಿ ಮಾತನಾಡುತ್ತಿದ್ದ ಸಚಿವ ಮಹದೇವಪ್ಪ ಅವರು ಬಿಸಿಲಿನ ತಾಪಕ್ಕೆ ಇದ್ದಕ್ಕಿಂದ್ದಂತೆ ಸುಸ್ತಾದರು. ತಮ್ಮ ಮಾತು ಮುಂದುವರಿಸಲು ಸಾಧ್ಯವಾಗದೆ ತಾವು ಭಾಷಣ ಮಾಡುತ್ತಿದ್ದ ಪೋಡಿಯಂಗೆ ಒರಗಿಕೊಂಡರು. ಕೂಡಲೇ ಅಲ್ಲಿನ ಸಿಬ್ಬಂದಿ ಅವರನ್ನು ಹಿಡಿದುಕೊಂಡು ಕುರ್ಚಿಯಲ್ಲಿ ಕೂಡಿಸಿದರು. ಬಳಿಕ ಅವರಿಗೆ ನೀರು ಕುಡಿಸಲಾಯಿತು. ಇದನ್ನು ಗಮನಿಸಿದ ಶಾಸಕ ತನ್ವೀರ್ ಸೇಠ್ ಅವರು ಕೂಡಲೇ ಬಂದು ಚಾಕೊಲೇಟ್ ನೀಡಿದರು. ಸ್ವಲ್ಪ ಸಮಯದ ಬಳಿಕ ಸಚಿವ ಮಹದೇವಪ್ಪ ಚೇತರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾದರು.
ಇದಕ್ಕೂ ಮುನ್ನ ಮಾತನಾಡಿದ ಅವರು, ದೇಶದ ಸಾರ್ವಭೌಮತ್ವ ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಜನರು ಸದಾ ಆಲೋಚಿಸಬೇಕು ಎಂದು ಕರೆ ನೀಡಿದರು.
ನಮ್ಮ ದೇಶದ ತ್ರಿವರ್ಣ ಧ್ವಜದಲ್ಲಿರುವ ಮೂರು ಬಣ್ಣಗಳು ಒಟ್ಟಾಗಿ ದೇಶದ ಶಾಂತಿ, ಐಕ್ಯತೆ, ಸೌಹಾರ್ದತೆ ಧೈರ್ಯವನ್ನು ಪ್ರತಿನಿಧಿಸುತ್ತಿದ್ದು, ಕೆಲವು ಮತಿಗೇಡಿಗಳು ಈ ಬಣ್ಣಗಳ ವಾಸ್ತವಿಕವಾದ ಪ್ರಾಮುಖ್ಯತೆಯನ್ನು ಮರೆತು ಕೇಸರಿ ಮತ್ತು ಹಸಿರು ಬಣ್ಣಗಳನ್ನು ಧಾರ್ಮಿಕ ವಿಭಜನೆಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು ಇದು ನಿಜಕ್ಕೂ ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಜನರಲ್ಲಿ ದೇಶದ ಕುರಿತು ಕಾಳಜಿ ಮೂಡಿಸಬೇಕು. ಬ್ರಿಟಿಷ್ ಸರ್ವಾಧಿಕಾರದ ಆಳ್ವಿಕೆಯಿಂದ ಮುಕ್ತಗೊಂಡು ಸ್ವತಂತ್ರ ರಾಷ್ಟ್ರದ ಕನಸು ನನಸಾದ ಈ ದಿನ ಭಾರತೀಯರೆಲ್ಲರಿಗೂ ಪವಿತ್ರವಾದ ದಿನ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಈ ದೇಶದ ಎಲ್ಲಾ ಹೋರಾಟದ ಮನಸ್ಸುಗಳ ಸಾಂಘಿಕ ಪ್ರಯತ್ನದಿಂದ ನಡೆದ ಹೋರಾಟವು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಬಸವಾದಿ ಶರಣರ ದಾಸೋಹದ ಕಲ್ಪನೆಯಡಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ನಂತಹ ಯೋಜನೆಗಳು ಬಡವರ ಹಸಿವನ್ನು ನೀಗಿಸದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳು ಕಡು ಬಡವರು ಮತ್ತು ಬಡ ಮಧ್ಯಮ ವರ್ಗದವರ ದೈನಂದಿನ ಬದುಕಿಗೆ ಆಶಾದಾಯಕವಾಗಿ ಪರಿಣಮಿಸಿದೆ. ದೇಶ ಮತ್ತು ಜನರನ್ನು ಇಷ್ಟಪಡುವ ಕಾರಣಕ್ಕಾಗಿಯೇ ಇಂದು ಜನರ ಬದುಕಿಗೆ ಬೇಕಾದ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಒದಗಿಸಿದೆ ಎಂದು ಹೇಳಿದರು.
ಇದೇ ವೇಳೆ ಹಿರಿಯ ಸ್ವಾತಂತ್ರ ಹೋರಾಟಗಾರರನ್ನು ಸನ್ಮಾಸಿ, ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪೊಲೀಸರಿಂದ ಪಥ ಸಂಚಲನ ನಡೆಯಿತು.
ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೂತ್, ಜಿಪಂ ಸಿಇಓ ಗಾಯಿತ್ರಿ, ಎಸ್ಪಿ ಲಾಟ್ಕರ್ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ನನ್ನ ಆರೋಗ್ಯ ಸ್ಥಿರ- ಸಚಿವ ಡಾ.ಮಹದೇವಪ್ಪ
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಸುಸ್ತಾಗಿ ಕುಳಿತ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ, ನನ್ನ ಆರೋಗ್ಯ ಸ್ಥಿರವಾಗಿದೆ. ಯಾರು ಕೂಡ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಕಣ್ಣು ಮಂಜಾಯಿತು. ಬಿಸಿಲು ಹೆಚ್ಚಾಗಿದ್ದರಿಂದ ಆ ರೀತಿಯಾಗಿದೆ. ನೀರು ಕುಡಿದು ಸುಧಾರಿಸಿಕೊಂಡ ನಂತರ ಸರಿಯಾಯಿತು. ನನಗೆ ಬಿಪಿ ಶುಗರ್ ಇಲ್ಲ, ನನ್ನ ಆರೋಗ್ಯ ಸ್ಥಿರವಾಗಿದೆ. ತಪಾಸಣೆಗೆ ಒಳಗಾಗುವ ಅವಶ್ಯಕತೆ ಇಲ್ಲ. ಚೆನ್ನಾಗಿದ್ದೇನೆ ಎಂದು ಮಾಹಿತಿ ನೀಡಿದರು.