ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.23: ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಟೆಸ್ಲಾ ಕಂಪನಿಯು ರಾಜ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಬಗ್ಗೆ ಪರಿಗಣಿಸಬೇಕು. ಕಂಪನಿ ಘಟಕ ಸ್ಥಾಪಿಸಲು ನಿರ್ಧರಿಸಿದರೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಕೋರಿದ್ದಾರೆ.
ಟೆಸ್ಲಾ ಕಂಪನಿಯು ತನ್ನ ಉದ್ಯಮವನ್ನು ಭಾರತದಲ್ಲಿ ವಿಸ್ತರಿಸಲು ಇಷ್ಟಪಡುವುದಾದರೆ ಕರ್ನಾಟಕ ರಾಜ್ಯವು ಅದಕ್ಕೆ ಪ್ರಶಸ್ತ ತಾಣವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಸೌರಫಲಕಗಳು ಮತ್ತಿತರ ಪರ್ಯಾಯ ಇಂಧನ ಉತ್ಪನ್ನಗಳನ್ನು ತಯಾರಿಸುತ್ತದೆ. ಅಲ್ಲದೇ, ಸ್ಪೇಸ್- ಎಕ್ಸ್ ಕಂಪನಿ ಮೂಲಕ ಉಪಗ್ರಹ ಅಂತರ್ಜಾಲ ಸೇವೆ (ಸ್ಟಾರ್ ಲಿಂಕ್) ಒದಗಿಸುತ್ತಿದೆ. ಈ ಕಂಪನಿಗಳನ್ನು ಮುನ್ನಡೆಸುತ್ತಿರುವ ಉದ್ಯಮಿ ಎಲಾನ್ ಮಸ್ಕ್ ಅವರು ಕರ್ನಾಟಕದಲ್ಲಿ ಯಾವುದೇ ಉದ್ಯಮ ಸ್ಥಾಪಿಸುವುದಾದರೆ ಸಹಕಾರ ಕೊಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಈ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಪಾಟೀಲ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯವು ತಂತ್ರಜ್ಞಾನ ಮತ್ತು ತಯಾರಿಕಾ ಕ್ಷೇತ್ರದಲ್ಲಿ 5.0 ಪ್ರಮಾಣೀಕೃತ ಮಟ್ಟ ಅಳವಡಿಸಿಕೊಂಡು ಕೈಗಾರಿಕಾ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ. ಹೀಗಾಗಿ, ಟೆಸ್ಲಾ ಘಟಕ ತೆರೆಯಲು ಇದು ಸೂಕ್ತ ನೆಲೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರು ಎಲಾನ್ ಮಸ್ಕ್ ಅವರನ್ನು ಭೇಟಿ ಮಾಡಿ ದೇಶದಲ್ಲಿ ಬಂಡವಾಳ ಹೂಡುವಂತೆ ಕೋರಿದ್ದರು. ಆ ಹಿನ್ನೆಲೆಯಲ್ಲಿ ಪಾಟೀಲ ಅವರು ಟ್ವೀಟ್ ಮಾಡಿ ಕರ್ನಾಟಕಕ್ಕೇ ಬನ್ನಿ ಎನ್ನುವ ಮನವಿ ಮಾಡಿದ್ದಾರೆ.