ಸುದ್ದಿಮೂಲ ವಾರ್ತೆ
ಮೈಸೂರು, ಆ.11:ಪೌಷ್ಠಿಕ ಆಹಾರ ಯೋಜನೆಯಡಿ ಅರಣ್ಯ ಮತ್ತು ಅರಣ್ಯ ದಂಚಿನಲ್ಲಿರುವ 11 ಬುಡಕಟ್ಟು ಸಮುದಾಯದ ಸುಮಾರು 47 ಸಾವಿರ ಕುಟುಂಬಗಳಿಗೆ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿದೆ. ಇದಕ್ಕಾಗಿ 115 ಕೋಟಿ ರೂ. ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.
ಎಚ್.ಡಿ,ಕೋಟೆ ತಾಲೂಕಿನಲ್ಲಿ ಬುಡಕಟ್ಟು ಸಮುದಾಯ ಕುಟಂಬಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರಗ ಮತ್ತು ಜೇನುಕುರುಬ ಸಮುದಾಯದವರಿಗೆ ಈಗಾಗಲೇ 2742 ಮನೆಗಳನ್ನು 3.75 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 1598 ಮನೆಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ನೈಜ ದುರ್ಬಲ ಬುಡಕಟ್ಟು ಜನರಿಗೆ ಉದ್ಯೋಗ ಅವಕಾಶ, ಕೌಶಲ್ಯ ಅಭಿವೃದ್ದಿ ನೀಡಿ ಸ್ವಾವಲಂಬಿಗಳನ್ನಾಗಿಸಲು ಈಗಾಗಲೇ ಸಮೀಕ್ಷೆ ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ. ಆದಿವಾಸಿ ಆರೋಗ್ಯ ಕಾರ್ಯಕರ್ತರನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನೇಮಿಸುವ ಮೂಲಕ ಬುಡಕಟ್ಟು ಜನರ ಆರೋಗ್ಯ ಸುಧಾರಣೆಗೆ ಹಾಗೂ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಕ್ರಮವಹಿಸಲಾಗಿದೆ ಎಂದರು.
ರಾಜ್ಯದಲ್ಲಿ 5. 50 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು, ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶಿಕ್ಷಣ, ಆರ್ಥಿಕ ಪ್ರಗತಿ, ಮೂಲಭೂತ ಸೌಕರ್ಯ, ಕೌಶಲ್ಯ ಅಭಿವೃದ್ಧಿ , ಸಾಮಾಜಿಕ ಸಬಲೀಕರಣಕ್ಕಾಗಿ ಶ್ರಮಿಸಲಾಗುತ್ತಿದೆ. ನೈಜ ದುರ್ಬಲ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಅನೇಕ ಮಹತ್ತರ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.